➤ ಭಾರತದಾದ್ಯಂತ ಪ್ರತಿ ವರ್ಷ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ (National Forest Martyrs Day) ವನ್ನು ಆಚರಿಸಲಾಗುತ್ತದೆ. ಕಾಡು, ವನ್ಯಜೀವಿಗಳು ಮತ್ತು ಪ್ರಕೃತಿಯನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ➤ ಈ ದಿನಕ್ಕೆ ಸುದೀರ್ಘವಾದ ಐತಿಹಾಸಿಕ ಹಿನ್ನೆಲೆಯಿದ್ದು, 1730ರ ಪ್ರಸಿದ್ಧ 'ಖೇಜರ್ಲಿ ಬಲಿದಾನ' (Khejarli Sacrifice) ಕ್ಕೆ ಇದು ನೇರ ಸಂಬಂಧ ಹೊಂದಿದೆ.➤ 2013 ರಲ್ಲಿ ಭಾರತದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಅಧಿಕೃತವಾಗಿ ಘೋಷಿಸಿತು. ಇದಕ್ಕೆ ಮುಖ್ಯ ಕಾರಣ 1730 ಸೆಪ್ಟೆಂಬರ್ 11 ರಂದು ರಾಜಸ್ಥಾನದ ಖೇಜರ್ಲಿ ಗ್ರಾಮದಲ್ಲಿ ಪ್ರಕೃತಿಯನ್ನು ರಕ್ಷಿಸಲು ಅಮೃತಾ ದೇವಿ ಬಿಷ್ಣೋಯಿ ಅವರ ನೇತೃತ್ವದಲ್ಲಿ 360ಕ್ಕೂ ಹೆಚ್ಚು ಬಿಷ್ಣೋಯಿ ಸಮುದಾಯದ ಜನರು ತಮ್ಮ ಜೀವತ್ಯಾಗ ಮಾಡಿದ್ದರು.➤ ಖೇಜರ್ಲಿ ಬಲಿದಾನದ ಐತಿಹಾಸಿಕ ಹಿನ್ನೆಲೆ (1730)- ಘಟನೆ: 1730 ರಲ್ಲಿ ಜೋಧ್‌ಪುರದ ಮಹಾರಾಜ ಅಭಯ್ ಸಿಂಗ್ ಅವರು ತಮ್ಮ ಹೊಸ ಅರಮನೆ ನಿರ್ಮಾಣಕ್ಕೆ ಸುಣ್ಣದ ಗೂಡುಗಳನ್ನು ಉರಿಸಲು ಸೌದೆಗಾಗಿ ಖೇಜ್ರಿ (Khejri) ಮರಗಳನ್ನು ಕತ್ತರಿಸಲು ಸೈನಿಕರನ್ನು ಕಳುಹಿಸಿದರು.- ಪ್ರತಿಭಟನೆ: ಖೇಜರ್ಲಿ ಗ್ರಾಮದ ಬಿಷ್ಣೋಯಿ ಸಮುದಾಯದವರು ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದರು. ಬಿಷ್ಣೋಯಿ ಧರ್ಮದ ತತ್ವಗಳ ಪ್ರಕಾರ ಮರಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು ಪವಿತ್ರ ಕರ್ತವ್ಯವಾಗಿದೆ.- ಅಮೃತಾ ದೇವಿ ಬಿಷ್ಣೋಯಿ ಸಾಹಸ: ಅಮೃತಾ ದೇವಿ ಅವರು ಮರಗಳನ್ನು ಅಪ್ಪಿಕೊಂಡು "ಮರವನ್ನು ಉಳಿಸಲು ನನ್ನ ತಲೆ ಹೋದರೂ ಅದು ಸಣ್ಣ ತ್ಯಾಗ" (ಸೀರ್ ಸಾಠೆ ರೂಂಖ್ ರಹೇ ತೋ ಭೀ ಸಸ್ತೋ ಜಾಣ್) ಎಂದು ಸೈನಿಕರಿಗೆ ಸವಾಲೆಸೆದರು.- ಬಲಿದಾನ: ಸೈನಿಕರು ಅಮೃತಾ ದೇವಿ, ಅವರ ಮೂವರು ಪುತ್ರಿಯರು ಸೇರಿದಂತೆ ಮರಗಳನ್ನು ಅಪ್ಪಿಕೊಂಡಿದ್ದ 363 ಕ್ಕೂ ಹೆಚ್ಚು ಜನರನ್ನು ದಯೆಯಿಲ್ಲದೆ ಹತ್ಯೆ ಮಾಡಿದರು.- ಪರಿಣಾಮ: ಈ ಭೀಕರ ಮಾರಣಹೋಮದ ಸುದ್ದಿ ತಿಳಿದ ಮಹಾರಾಜರು ತಕ್ಷಣವೇ ಮರ ಕತ್ತರಿಸುವುದನ್ನು ನಿಲ್ಲಿಸಿ, ಬಿಷ್ಣೋಯಿ ಪ್ರದೇಶಗಳಲ್ಲಿ ಮರ ಕತ್ತರಿಸುವುದು ಮತ್ತು ಬೇಟೆಯಾಡುವುದನ್ನು ನಿಷೇಧಿಸಿ ಆಜ್ಞೆ ಹೊರಡಿಸಿದರು.