* ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಜಾನಪದ ವಿದ್ವಾಂಸರಾದ ಎಂ.ಜಿ. ಈಶ್ವರಪ್ಪ(74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂನ್ 1 ರಂದು ನಿಧನರಾಗಿದ್ದಾರೆ. ಕಳೆದ 15 ದಿನಗಳಿಂದ ನ್ಯುಮೊನಿಯಾದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ನಿಧನರಾಗಿದ್ದಾರೆ.
* ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ‘ಈಶ್ವರಪ್ಪ ಮೇಷ್ಟ್ರು‘ ಎಂದೇ ಖ್ಯಾತರಾಗಿದ್ದರು. 38 ವರ್ಷಗಳ ಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಈಶ್ವರಪ್ಪ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು.
* 1950 ರಲ್ಲಿ ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ಜನಿಸಿದ ಈಶ್ವರಪ್ಪ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪಿಎಚ್.ಡಿ ಮುಗಿಸಿದರು. ಹುಟ್ಟಿದ್ದು, ಶಿವಮೊಗ್ಗ ಜಿಲ್ಲೆಯಾದರೂ ದಾವಣಗೆರೆ ಈಶ್ವರಪ್ಪ ಅವರ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು.
* 1987ರಿಂದ 90ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಈಶ್ವರಪ್ಪನವರು 2003ರಿಂದ 2006ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೆಂಬರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
* ಡಿ.ಆರ್.ಎಂ ಕಾಲೇಜು ನಂತರ ಎಂ.ಎಸ್.ಬಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಬಳಿಕ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
* ಶಿಕ್ಷಣಕ್ಷೇತ್ರ, ಸಾಹಿತ್ಯಕ್ಷೇತ್ರ ಹಾಗೂ ರಂಗಭೂಮಿಯಲ್ಲಿನ ಕಾರ್ಯಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡೆಮಿಯ`ತಜ್ಞ ಪ್ರಶಸ್ತಿ’, ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ದಾವಣಗೆರೆ ಜಿಲ್ಲೆಯ ‘ಮಹಲಿಂಗರಂಗ’ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ‘ಶಿವಕುಮಾರ ರಂಗ ಪ್ರಶಸ್ತಿ’ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.
ಜಾನಪದ ವಿದ್ವಾಂಸ, ಸಾಹಿತಿ ಎಂ.ಜಿ. ಈಶ್ವರಪ್ಪ ನಿಧನ
Published by Yallamma G
03 ಜೂನ್ 2024