➤ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಎಂಜಿನಿಯರ್‌ಗಳ ದಿನ (National Engineers' Day) ಎಂದು ಆಚರಿಸಲಾಗುತ್ತದೆ. ಆಧುನಿಕ ಮೈಸೂರಿನ ಶಿಲ್ಪಿ, ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (Sir M. Visvesvaraya) ಅವರ ಅಪಾರ ಸಾಧನೆ ಮತ್ತು ರಾಷ್ಟ್ರನಿರ್ಮಾಣದ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರಿಂದ ನಮನ: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮಜಯಂತಿಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿ: "ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತ ಪ್ರತಿಭೆಯಾಗಿದ್ದರು. ಅವರ ದೂರದೃಷ್ಟಿಯ ರಾಷ್ಟ್ರನಿರ್ಮಾಣದ ಚಿಂತನೆಗಳು ಇಂದಿಗೂ ಪ್ರತಿಯೊಬ್ಬ ನಾಗರಿಕನಿಗೂ ಪ್ರೇರಣೆಯಾಗಿದೆ," ಎಂದು ಪ್ರಶಂಸಿದ್ದಾರೆ.
- ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್: "ದೇಶದ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೂಲಕ ಕೊಡುಗೆ ನೀಡುತ್ತಿರುವ ಎಲ್ಲಾ ಎಂಜಿನಿಯರ್‌ಗಳಿಗೆ ಶುಭಾಶಯಗಳು," ಎಂದು ಶುಭ ಕೋರಿದ್ದಾರೆ.
➤ 1968ರಲ್ಲಿ ಭಾರತ ಸರ್ಕಾರವು ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15 ಅನ್ನು ಅಧಿಕೃತವಾಗಿ ‘ರಾಷ್ಟ್ರೀಯ ಎಂಜಿನಿಯರ್‌ಗಳ ದಿನ’ ಎಂದು ಘೋಷಿಸಿತು. ದೇಶದ ಮೂಲಸೌಕರ್ಯ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಗೌರವಿಸಲು ಈ ನಿರ್ಧಾರ ಕೈಗೊಳ್ಳಲಾಯಿತು.
ಸರ್ ಎಂ. ವಿಶ್ವೇಶ್ವರಯ್ಯನವರ ಐತಿಹಾಸಿಕ ಸಾಧನೆಗಳು:
1. ಕೃಷ್ಣರಾಜ ಸಾಗರ (KRS) ಆಣೆಕಟ್ಟು: ಮೈಸೂರು ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೆಆರ್‌ಎಸ್ (KRS) ಆಣೆಕಟ್ಟಿನ ಮುಖ್ಯ ರೂವಾರಿ ವಿಶ್ವೇಶ್ವರಯ್ಯನವರು. ಆ ಸಮಯದಲ್ಲಿ ಇದು ಏಷ್ಯಾದಲ್ಲೇ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿತ್ತು.
2. ಸ್ವಯಂಚಾಲಿತ ಫ್ಲಡ್ ಗೇಟ್‌ಗಳು (Automatic Sluice Gates): 1903 ರಲ್ಲಿ ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ನೀರಿನ ವ್ಯರ್ಥ ತಡೆಯಲು ಸ್ವಯಂಚಾಲಿತ ಬಾಗಿಲುಗಳನ್ನು (Automatic Sluice Gates) ವಿನ್ಯಾಸಗೊಳಿಸಿ ಅಳವಡಿಸಿದರು. ಈ ತಂತ್ರಜ್ಞಾನವು ಪೇಟೆಂಟ್ ಪಡೆಯಿತು.
3. ಹೈದರಾಬಾದ್ ಮುಸಿ ನದಿ ಪ್ರವಾಹ ನಿಯಂತ್ರಣ: 1908 ರಲ್ಲಿ ಹೈದರಾಬಾದ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ, ನಗರವನ್ನು ರಕ್ಷಿಸಲು ವಿಶೇಷ ಚರಂಡಿ ಹಾಗೂ ನೀರಾವರಿ ವ್ಯವಸ್ಥೆಯನ್ನು ರೂಪಿಸಿದರು.
4. ಆಧುನಿಕ ಮೈಸೂರಿನ ನಿರ್ಮಾಣ: ದಿವಾನರಾಗಿದ್ದ ಅವಧಿಯಲ್ಲಿ ಕರ್ನಾಟಕದ ಕೈಗಾರಿಕಾ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಶಕ್ತಿ ತುಂಬಿದರು:
- ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL)
- ಮೈಸೂರು ಸಾಬೂನು ಕಾರ್ಖಾನೆ (Mysore Sandal Soap)
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBM)
- ಕನ್ನಡ ಸಾಹಿತ್ಯ ಪರಿಷತ್ತು (1915)
- ಬೆಂಗಳೂರಿನ ಯುವಿಸಿಇ (UVCE) ಎಂಜಿನಿಯರಿಂಗ್ ಕಾಲೇಜು

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ