ಹಿಂದೂ ಮಹಾ ಸಾಗರದಾದ್ಯಂತ ಭಾರತದ ಸಹಾಯ ಹಸ್ತ ವಿಸ್ತರಿಸಲು INS ಕೇಸರಿಯಿಂದ ‘ಮಿಷನ್ ಸಾಗರ್’ ಅಡಿಯಲ್ಲಿ 49 ದಿನಗಳಲ್ಲಿ 14,000 ಕಿ.ಮೀ ಸಂಚಾರ
Published by Basavaraj Halli
09 ಜುಲೈ 2020
ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದಾದ್ಯಂತ ಭಾರತದ ಸಹಾಯ ಹಸ್ತ ವಿಸ್ತರಿಸಲು ‘ಮಿಷನ್ ಸಾಗರ್’ ಯೋಜನೆಯನ್ನು 10 ಮೇ 2020 ರಂದು ಪ್ರಾರಂಭಿಸಲಾಯಿತು.
ಮಿಷನ್ ಸಾಗರ್ ಯೋಜನೆಯಡಿಯಲ್ಲಿ ಸುಮಾರು 49 ದಿನಗಳ ನಂತರ, "ಐಎನ್ಎಸ್ ಕೇಸರಿ" ನೌಕೆಯು ಯಶಸ್ವಿಯಾಗಿ 28 ಜೂನ್ 2020 ರಂದು ಭಾರತಕ್ಕೆ ಮರಳಿತು, ಹಾಗು ಈ 49 ದಿನಗಳಲ್ಲಿ ಇದು ಬರೋಬ್ಬರಿ 14000 ಕಿ.ಮೀ ಗಿಂತಲೂ ಅಧಿಕ ದೂರ ಕ್ರಮಿಸಿತ್ತು.
ಮಿಷನ್ ಸಾಗರ್ : COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮ್ಮ ರಾಷ್ಟ್ರದ ಕಡಲ ನೆರೆಹೊರೆಯವರಿಗೆ ನೆರವು ನೀಡಲು "ಮಿಷನ್ ಸಾಗರ್" ಪ್ರಾರಂಭಿಸಲಾಯಿತು, ಹಾಗೂ ಈ ಮಿಷನ್ ಗಾಗಿ ಭಾರತೀಯ ನೌಕಾ ಹಡಗು "ಐಎನ್ಎಸ್ ಕೇಸರಿ"ಯನ್ನು ನಿಯೋಜಿಸಲಾಗಿತ್ತು.
ನೌಕೆಯು COVID-19 ಸಂಬಂಧಿತ ಅಗತ್ಯ ಔಷಧಿಗಳು (ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಮತ್ತು ಆಯುರ್ವೇದ ಔಷಧಿಗಳನ್ನು ಒಳಗೊಂಡಂತೆ), ವೈದ್ಯಕೀಯ ಸಹಾಯ ತಂಡಗಳು ಮತ್ತು ಸುಮಾರು 600 ಟನ್ ಆಹಾರ ಪದಾರ್ಥಗಳೊಂದಿಗೆ, ಐಎನ್ಎಸ್ ಕೇಸರಿ ಮಿಷನ್ ಗಾಗಿ ಸಂಚಾರ ಆರಂಭಿಸಿತ್ತು.