ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕ್ರಮ: ಕಲ್ಯಾಣ ಕರ್ನಾಟಕಕ್ಕೆ ಕೇವಲ 36 ಹುದ್ದೆ! ಅಭ್ಯರ್ಥಿಗಳ ಅಸಮಾಧಾನ
ಕರ್ನಾಟಕ ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ, ವಿಶೇಷವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದ ಸರ್ಕಾರಿ ಪದವಿ ಪೂರ್ವ (PU) ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಒಟ್ಟು 814 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ 36 ಹುದ್ದೆಗಳನ್ನು ಮಾತ್ರ ಮೀಸಲಿಟ್ಟಿರುವುದು ಈ ಭಾಗದ ಉದ್ಯೋಗಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲಿ ಈ ಭಾಗಕ್ಕೆ ಕಡಿಮೆ ಸಂಖ್ಯೆಯ ಹುದ್ದೆಗಳನ್ನು ನಿಗದಿಪಡಿಸಿರುವುದಕ್ಕೆ ಸ್ಥಳೀಯ ಅಭ್ಯರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುದ್ದೆಗಳ ವಿವರ :
- ಒಟ್ಟು ಉಪನ್ಯಾಸಕರ ಹುದ್ದೆಗಳು - 814
- ಸಾಮಾನ್ಯ ವೃಂದದ ಹುದ್ದೆಗಳು - 778
- ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು - 36
ಹುದ್ದಗಳ ಹಂಚಿಕೆಯ ವಿವರ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ?
ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ರಾಜ್ಯಾದ್ಯಂತ ಒಟ್ಟು 814 ಪಿಯು ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಮೂಲ ವೃಂದ (Non-HK): 778 ಹುದ್ದೆಗಳು.
ಕಲ್ಯಾಣ ಕರ್ನಾಟಕ ವೃಂದ (HK - 371J): ಕೇವಲ 36 ಹುದ್ದೆಗಳು.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಹುದ್ದೆಗಳು ಗಣನೀಯವಾಗಿ ಖಾಲಿ ಇವೆ. ಹೀಗಿರುವಾಗ ಕೇವಲ 36 ಹುದ್ದೆಗಳಿಗೆ ಮಾತ್ರ ನೇಮಕಾತಿ ಸೀಮಿತಗೊಳಿಸಿರುವುದು ಈ ಭಾಗದ ಶೈಕ್ಷಣಿಕ ಅಗತ್ಯ ಹಾಗೂ ಉದ್ಯೋಗಾವಕಾಶಗಳ ದೃಷ್ಟಿಯಿಂದ ತೀವ್ರ ಹಿನ್ನಡೆಯಾಗಿದೆ ಎಂಬುದು ಅಭ್ಯರ್ಥಿಗಳ ವಾದವಾಗಿದೆ.
ಅವೈಜ್ಞಾನಿಕ ನೇಮಕಾತಿ: ತಜ್ಞರ ಆರೋಪವೇನು?
ಸರ್ಕಾರಿ ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಕುಮಾರ್ ಸಂಗೋಳಗಿ ಅವರ ಪ್ರಕಾರ, "2014ರ ಹಳೆಯ ವರದಿ ಆಧರಿಸಿ ಹುದ್ದೆಗಳನ್ನು ಅವೈಜ್ಞಾನಿಕವಾಗಿ ಭರ್ತಿ ಮಾಡಲಾಗುತ್ತಿದೆ. ಹೀಗಾಗಿ, ಕಲ್ಯಾಣ ಕರ್ನಾಟಕದಲ್ಲಿ ಕೇವಲ 36 ಹುದ್ದೆಗಳನ್ನು ಮಾತ್ರ ತೋರಿಸಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಭರ್ತಿ ಮಾಡುವುದನ್ನು ಬಿಟ್ಟು, ಕೇವಲ ಕಾಟಾಚಾರಕ್ಕೆ 36 ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ
ಸಂವಿಧಾನದ 371(J) ಆಶಯಕ್ಕೆ ಧಕ್ಕೆ
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಿಕೊಡುವ ಮೂಲ ಉದ್ದೇಶದಿಂದಲೇ ಸಂವಿಧಾನದಲ್ಲಿ '371(ಜೆ)' ವಿಶೇಷ ಅವಕಾಶವನ್ನು ಜಾರಿಗೆ ತರಲಾಗಿದೆ. ಈ ಭಾಗದಲ್ಲಿ ಅಗತ್ಯವಿರುವಷ್ಟು ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡಿದರೆ ಮಾತ್ರ ಸಂವಿಧಾನದ ಆಶಯ ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ. ಆದರೆ ಪ್ರಸ್ತುತ ಅಧಿಸೂಚನೆಯು ಈ ಆಶಯಕ್ಕೆ ತಣ್ಣೀರೆರಚಿದಂತಿದೆ.
ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ
ಅಭ್ಯರ್ಥಿಗಳ ಪ್ರಮುಖ ಬೇಡಿಕೆಗಳೇನು?
ಈ ತಾರತಮ್ಯವನ್ನು ವಿರೋಧಿಸಿ ಅರ್ಹ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪದವಿ ಪೂರ್ವ) ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಮ್ಮ ಆಕ್ಷೇಪವನ್ನು ದಾಖಲಿಸಿದ್ದಾರೆ. ಅವರ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:
- ಕೇವಲ ಕಾಗದದ ಮೇಲಿರುವ ಹಳೆಯ ಮಂಜೂರಾದ ಹುದ್ದೆಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಳ್ಳಬಾರದು.
- ಕಲ್ಯಾಣ ಕರ್ನಾಟಕ ಭಾಗದ ಪ್ರಸ್ತುತ ವಿಷಯವಾರು ಖಾಲಿ ಹುದ್ದೆಗಳು, ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜುಗಳ ನೈಜ ಸ್ಥಿತಿಗತಿಯನ್ನು ಅಧ್ಯಯನ ಮಾಡಬೇಕು.
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಅವಶ್ಯಕತೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವೈಜ್ಞಾನಿಕವಾಗಿ ಹುದ್ದೆಗಳನ್ನು ಪರಿಷ್ಕರಿಸಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಈ ಕೂಡಲೇ ಎಚ್ಚೆತ್ತುಕೊಂಡು ಅಧಿಸೂಚನೆಯನ್ನು ಮರುಪರಿಶೀಲಿಸಿ, ಕಲ್ಯಾಣ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ KPSCVaani ಜಾಲತಾಣವನ್ನು ಫಾಲೋ ಮಾಡಿ.
