➤ ಬಾನ್ ಚಾಲೆಂಜ್ (Bonn Challenge): ವಿನಾಶದಂಚಿಗೆ ತಲುಪುತ್ತಿರುವ ಜಾಗತಿಕ ಪರಿಸರ ಅಥವಾ ಭೂಮಿಗೆ ಮರುಜೀವ ನೀಡಲು ಜಗತ್ತಿನಾದ್ಯಂತ ದೇಶಗಳು ಒಂದಾಗಿ ಕೈಜೋಡಿಸಿರುವ ಒಂದು ಸ್ವಯಂಪ್ರೇರಿತ ಜಾಗತಿಕ ಶಪಥ ಅಥವಾ ಸವಾಲೇ 'ಬಾನ್ ಚಾಲೆಂಜ್' ಇದನ್ನು 2011ರಲ್ಲಿ ಜರ್ಮನಿ ಸರ್ಕಾರ ಮತ್ತು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಜಂಟಿಯಾಗಿ ಜರ್ಮನಿಯ 'ಬಾನ್' ನಗರದಲ್ಲಿ ಜಾರಿಗೆ ತಂದವು. ಇಡೀ ಪ್ರಪಂಚದಲ್ಲಿ ಹಾಳಾಗಿರುವ 150 ಮಿಲಿಯನ್ ಹೆಕ್ಟೇರ್ ಭೂಮಿಯನ್ನು 2020ರ ವೇಳೆಗೆ ಹಾಗೂ 350 ಮಿಲಿಯನ್ ಹೆಕ್ಟೇರ್ ಭೂಮಿಯನ್ನು 2030ರ ವೇಳೆಗೆ ಮತ್ತೆ ಹಸಿರಾಗಿಸುವುದು, ಅಲ್ಲಿ ಕಾಡು ಮತ್ತು ಕೃಷಿಯನ್ನು ಮರುಸ್ಥಾಪಿಸುವುದು ಇದರ ಮುಖ್ಯ ಆಶಯವಾಗಿದೆ.
➤ ಭಾರತದ ಜಾಗತಿಕ ಸಂಕಲ್ಪ: 2019 ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಮರುಭೂಮೀಕರಣ ವಿರೋಧಿ ಸಮಾವೇಶದ (UNCCD COP-14) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಪಾಳು ಭೂಮಿಯನ್ನು ಪುನಶ್ಚೇತನಗೊಳಿಸುವ ಭಾರತದ ಜಾಗತಿಕ ಸಂಕಲ್ಪವನ್ನು ಪ್ರಕಟಿಸಿದ್ದರು. ಇದು ವಿಶ್ವದಲ್ಲೇ ಅತಿ ದೊಡ್ಡ ಪರಿಸರ ಸಂರಕ್ಷಣಾ ಗುರಿಗಳಲ್ಲಿ ಒಂದಾಗಿದೆ.
➤ ರಾಜ್ಯವಾರು ಪ್ರಗತಿ: ತೆಲಂಗಾಣಕ್ಕೆ ಅಗ್ರಸ್ಥಾನ: IUCN ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದಲ್ಲೇ ಅತ್ಯಂತ ಹೆಚ್ಚು ಭೂಮಿಯನ್ನು ಪರಿಸರ ಸ್ನೇಹಿಯಾಗಿ ಪರಿವರ್ತಿಸಿ, ಪುನಶ್ಚೇತನಗೊಳಿಸಿದ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ಪ್ರಥಮ ಸ್ಥಾನದಲ್ಲಿದೆ (ಸುಮಾರು 4.18 ಮಿಲಿಯನ್ ಹೆಕ್ಟೇರ್). ತೆಲಂಗಾಣವು ಕೃಷಿ ಅರಣ್ಯೀಕರಣ (Agroforestry) ಮೂಲಕ ಈ ಯಶಸ್ಸು ಕಂಡಿದೆ. ಇದರ ನಂತರದ ಸ್ಥಾನಗಳಲ್ಲಿ ಈ ಕೆಳಗಿನ ರಾಜ್ಯಗಳಿವೆ:
- ತೆಲಂಗಾಣ (ಪ್ರಥಮ ಸ್ಥಾನ)
- ಆಂಧ್ರಪ್ರದೇಶ
- ಗುಜರಾತ್
- ಮಧ್ಯಪ್ರದೇಶ
- ಒಡಿಶಾ
➤ ಯಶಸ್ಸಿಗೆ ಕಾರಣವಾದ ಪ್ರಮುಖ ಯೋಜನೆಗಳು:
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY): ಇದರ ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ 27 ಮಿಲಿಯನ್ ಹೆಕ್ಟೇರ್‌ಗೂ ಹೆಚ್ಚು ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.
- ಜಿಯೋ-ಟ್ಯಾಗ್ ನೈಸರ್ಗಿಕ ಆಸ್ತಿಗಳು: ಪರಿಸರ ಸಂರಕ್ಷಣೆಗೆ ಪೂರಕವಾದ 61.3 ಮಿಲಿಯನ್‌ಗೂ ಹೆಚ್ಚು ಜಿಯೋ-ಟ್ಯಾಗ್ ಹೊಂದಿದ ನೈಸರ್ಗಿಕ ಆಸ್ತಿಗಳನ್ನು ಸೃಷ್ಟಿಸಲಾಗಿದೆ.
- ಗ್ರೀನ್ ಇಂಡಿಯಾ ಮಿಷನ್ ಮತ್ತು ಕ್ಯಾಂಪಾ (CAMPA): ಕಳೆದ ಐದು ವರ್ಷಗಳಲ್ಲಿ ಕ್ಯಾಂಪಾ ನಿಧಿಯಡಿ ಸುಮಾರು 3.20 lakh ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಮಾಡಲಾಗಿದೆ.
- ಅರಾವಳಿ ಗ್ರೀನ್ ವಾಲ್ ಉಪಕ್ರಮ: ಮರುಭೂಮಿ ಹರಡುವಿಕೆಯನ್ನು ತಡೆಯಲು ಜಾರಿಗೆ ತರಲಾದ ಈ ಯೋಜನೆಯು ತನ್ನ ವಾರ್ಷಿಕ ಗುರಿಯನ್ನು ಮೀರಿದ ಸಾಧನೆ ಮಾಡಿದೆ.
- ಮಿಸ್ತಿ ಯೋಜನೆ (MISHTI): 2028ರ ವೇಳೆಗೆ 54,000 ಹೆಕ್ಟೇರ್ ಮ್ಯಾಂಗ್ರೋವ್ ಪ್ರದೇಶವನ್ನು ಪುನಶ್ಚೇತನಗೊಳಿಸುವ ಗುರಿ ಹೊಂದಲಾಗಿದೆ.