ಕೋಲ್ಕತಾ : ಭಾರತದ ಪೂರ್ವ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಅಂಪನ್ ಚಂಡಮಾರುತದಿಂದ ಒಡಿಸ್ಸಾ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳು ಸಂಕಷ್ಟ ಎದುರುಸುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಲ ರಾಜ್ಯಕ್ಕೆ ಭೇಟಿ ನೀಡಿ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಪ್ರಧಾನಿಗಳು ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ರೂಪಾಯಿಯನ್ನು ತತ್​ಕ್ಷಣದ ಆರಂಭಿಕ ಪರಿಹಾರವಾಗಿ ಘೋಷಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ನೀಡುವುದಾಗಿ ತಿಳಿಸಿದರು. ಜೊತೆಗೆ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂ ಪರಿಹಾರ ನೀಡುವುದಾಗಿ ಪ್ರಧಾನಿ ತಿಳಿಸಿದರು.