ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಚಿಮಣಿಗಳಿಂದ ಹೊರಸೂಸುವ ಮಾಲಿನ್ಯಕಾರಕ 'ಸಲ್ಫರ್‌ ಡೈ ಆಕ್ಸೈಡ್‌ (ಎಸ್‌ಒ2)' ಪ್ರಮಾಣ ಕಡಿಮೆಗೊಳಿಸಲು ರಾಜ್ಯ ಸರ್ಕಾರವು 'ಫ್ಲ್ಯು ಗ್ಯಾಸ್‌ ಡಿ ಸಲ್ಫರೈಜೇಷನ್‌ (ಎಫ್‌ಜಿಡಿ)' ತಂತ್ರಜ್ಞಾನದ ಅಳವಡಿಸಲು ಮುಂದಾಗಿದ್ದು ಇದಕ್ಕಾಗಿ ಸುಮಾರು ₹2,510 ಕೋಟಿ ವೆಚ್ಚ ಮಾಡಲಾಗುತ್ತಿದೆ. ಚಿಮಣಿಗಳಿಂದ ಬಿಡುವ ಹೊಗೆಯನ್ನು ಎಫ್‌ಜಿಡಿ ತಂತ್ರಜ್ಞಾನದ ಮೂಲಕ ಶುದ್ಧೀಕರಣ ಮಾಡುವ ಪ್ರಕ್ರಿಯೆಯನ್ನು ಈಗ ಅಳವಡಿಸಲಾಗುತ್ತಿದೆ. ವಿದ್ಯುತ್ ಸ್ಥಾವರದಲ್ಲಿರುವ ಈಗಿರುವ ಚಿಮಣಿಗಳಿಗೆ ಹೊಂದಿಕೊಂಡು ಎಫ್‌ಜಿಡಿ ತಂತ್ರಜ್ಞಾನದ ಗೋಪುರಗಳು ತಲೆ ಎತ್ತಲಿವೆ. ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಯರಮರಸ್‌ ಸೂಪರ್‌ ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಗಳಲ್ಲಿ ಇವುಗಳಲ್ಲಿ ಹಂತ ಹಂತವಾಗಿ ಎಫ್‌ಜಿಡಿ ಅಳವಡಿಸಲಾಗುತ್ತಿದೆ.