ಪಡಾಂಗ್‌: ಜಗತ್ತಿನಲ್ಲೇ ಅತಿ ದೊಡ್ಡದು ಎನ್ನಲಾದ ಹೂವು ಇಂಡೊನೇಷ್ಯಾದಲ್ಲಿ ಪತ್ತೆಯಾಗಿದೆ. 'ರಫ್ಲೆಷಿಯಾ ಟ್ಯೂಯಾನ್‌-ಮುಡೆ' ಹೆಸರಿನ ಈ ಕೆಂಪು ಹೂವು 111 ಸೆಂಟಿ ಮೀಟರ್‌ ವ್ಯಾಸ ಹೊಂದಿದೆ. ಈ ಮೊದಲು 107 ಸೆಂಟಿಮೀಟರ್‌ ವ್ಯಾಸ ಹೊಂದಿದ್ದ ಹೂವು ದಾಖಲೆ ನಿರ್ಮಿಸಿತ್ತು. ಇದು ಕೆಲವು ವರ್ಷಗಳ ಹಿಂದೆ ಪಶ್ಚಿಮ ಸುಮಾತ್ರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. 'ಸುಮಾತ್ರ ಬರಾತ್‌ ನೇಚರ್‌ ಕನ್ಸರ್ವೇಷನ್‌ ಏಜೆನ್ಸಿ' (ಬಿಕೆಎಸ್‌ಡಿಎ) ಬೃಹತ್‌ ಗಾತ್ರದ ಈ ಹೂವಿನ ಚಿತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದೆ. 'ಈಗ ಪತ್ತೆಯಾಗಿರುವ ಹೂವಿನ ಬಗ್ಗೆ ಎಲ್ಲಿಯೂ ದಾಖಲಾದ ಮಾಹಿತಿ ಇಲ್ಲ' ಎಂದು ಸುಮಾತ್ರದ ಅಗಂ ಸಂರಕ್ಷಣಾ ಸಂಸ್ಥೆಯ ತಜ್ಞ ಅಡೆ ಪುತ್ರಾ ತಿಳಿಸಿದ್ದಾರೆ. ಈ ಹೂವು ಒಂದು ವಾರದವರೆಗೆ ಮಾತ್ರ ಇರುತ್ತದೆ. ಬಳಿಕ ಬಾಡುತ್ತದೆ. ಬ್ರಿಟನ್‌ನ ಸರ್‌ ಸ್ಟ್ಯಾಮ್‌ಫೋರ್ಡ್‌ ರಫ್ಲೆಸ್‌ ಹೆಸರನ್ನು ಈ ಹೂವಿಗೆ ಇಡಲಾಗಿದೆ. ರಫ್ಲೆಸ್‌ 19ನೇ ಶತಮಾನದಲ್ಲಿ ಇಂಡೊನೇಷ್ಯಾದಲ್ಲಿ ಇದೇ ರೀತಿಯ ಹೂವು ಪತ್ತೆ ಮಾಡಿದ್ದರು. ಹೀಗಾಗಿ, ಅವರ ಹೆಸರನ್ನಿಡಲಾಗಿದೆ ಎಂದು ಅಡೆ ತಿಳಿಸಿದ್ದಾರೆ.