Karnataka AO & AAO Recruitment 2026: ಕೃಷಿ ಇಲಾಖೆಯ 'ಕೃಷಿ ಅಧಿಕಾರಿ' (AO) & 'ಸಹಾಯಕ ಕೃಷಿ ಅಧಿಕಾರಿ' (AAO) ನೇಮಕಾತಿಗೆ ಕರಡು ನಿಯಮಾವಳಿ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ.
ರಾಜ್ಯ ಕೃಷಿ ಇಲಾಖೆಯಲ್ಲಿನ ಬಹುನಿರೀಕ್ಷಿತ ಕೃಷಿ ಅಧಿಕಾರಿ (Agriculture Officer - AO) ಹಾಗೂ ಸಹಾಯಕ ಕೃಷಿ ಅಧಿಕಾರಿ (Assistant Agriculture Officer - AAO) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಕರ್ನಾಟಕ ಸರ್ಕಾರವು "ಕರ್ನಾಟಕ ಕೃಷಿ ಸೇವೆಗಳು (ವೃಂದ ಹಾಗೂ ನೇಮಕಾತಿ) (ತಿದ್ದುಪಡಿ) ನಿಯಮಗಳು, 2026" ರ ಕರಡು ಅಧಿಸೂಚನೆಯನ್ನು ದಿನಾಂಕ 18.11.2026 ರಂದು ಅಧಿಕೃತ ರಾಜ್ಯಪತ್ರದಲ್ಲಿ (Gazette) ಪ್ರಕಟಿಸಿದೆ.
ಈ ಕರಡು ನಿಯಮಾವಳಿಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅಂತಿಮ ನಿಯಮಾವಳಿ ಪ್ರಕಟಗೊಂಡ ನಂತರ AO ಮತ್ತು AAO ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಈ ಹೊಸ ಕರಡು ನಿಯಮಗಳಲ್ಲಿನ ಪ್ರಮುಖ ಅಂಶಗಳು, ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿಯ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವೇತನ ಶ್ರೇಣಿ (Pay Scale):
- ರಾಜ್ಯಪತ್ರದಲ್ಲಿ ಉಲ್ಲೇಖಿಸಿರುವಂತೆ ಪ್ರಮುಖ ಹುದ್ದೆಗಳ ಪರಿಷ್ಕೃತ ವೇತನ ಶ್ರೇಣಿ ಈ ಕೆಳಗಿನಂತಿದೆ:
- ಕೃಷಿ ಅಧಿಕಾರಿ (Agricultural Officer - AO): ₹69,250 - ₹1,34,200.
- ಸಹಾಯಕ ಕೃಷಿ ಅಧಿಕಾರಿ (Assistant Agricultural Officer - AAO): ₹65,950 - ₹1,24,900.
- ಸಹಾಯಕ ಕೃಷಿ ನಿರ್ದೇಶಕರು (Assistant Director of Agriculture): ₹83,700 - ₹1,55,200.
- ಅಧೀಕ್ಷಕರು (Superintendent): ₹61,300 - ₹1,12,900.
- ಪ್ರಥಮ ದರ್ಜೆ ಸಹಾಯಕರು (FDA) & ಶೀಘ್ರಲಿಪಿಗಾರರು (Stenographer): ₹44,425 - ₹83,700
AO & AAO ನೇರ ನೇಮಕಾತಿ: 85% ಮತ್ತು 15% ವಿದ್ಯಾರ್ಹತೆ ನಿಯಮವೇನು?
ಹೊಸ ಕರಡು ನಿಯಮಗಳ ಪ್ರಕಾರ, ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇರ ನೇಮಕಾತಿಯಲ್ಲಿ ವಿದ್ಯಾರ್ಹತೆಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
1. ಶೇಕಡಾ 85% ರಷ್ಟು ಹುದ್ದೆಗಳು:
ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ICAR) ಮಾನ್ಯತೆ ಪಡೆದ ಹಾಗೂ ಕಾನೂನಿನ್ವಯ ಸ್ಥಾಪಿತವಾದ ಕೃಷಿ ವಿಶ್ವವಿದ್ಯಾಲಯಗಳು ಅಥವಾ ಅವುಗಳಿಗೆ ಸಂಯೋಜಿತಗೊಂಡ (Affiliated) ಕೃಷಿ ಮಹಾವಿದ್ಯಾಲಯಗಳಿಂದ B.Sc (Agriculture) ಅಥವಾ B.Sc (Hons.) Agriculture ಪದವಿ ಪಡೆದ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳಲಾಗುವುದು.
2. ಉಳಿದ ಶೇಕಡಾ 15% ರಷ್ಟು ಹುದ್ದೆಗಳು:
ICAR ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳು ಅಥವಾ ಸಂಯೋಜಿತ ಕಾಲೇಜುಗಳಿಂದ ಈ ಕೆಳಗಿನ ಯಾವುದಾದರೂ ಒಂದು ಪದವಿ ಪಡೆದ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು:
B.Tech (Food Science and Technology) / B.Tech (Food Technology).
B.Sc (Agriculture Marketing and Co-operation) / B.Sc (Hons.) Agri Marketing and Co-operation / B.Sc (Hons.) Agri Business Management.
B.Sc (Agri Bio-Technology) / B.Tech (Bio-Technology).
B.Sc (Agricultural Engineering) / B.Tech (Agricultural Engineering).
(ವಿಶೇಷ ಸೂಚನೆ: 2016 ರಲ್ಲಿ ಅಧಿಸೂಚಿಸಲಾದ ನಿರ್ದಿಷ್ಟ ಹುದ್ದೆಗಳಿಗೆ ಕೃಷಿ ಸ್ನಾತಕ ಪದವಿ ಹೊರತುಪಡಿಸಿ ಇತರೆ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ).
ಮುಂಬಡ್ತಿ (Promotion) ನಿಯಮಗಳಲ್ಲಿ ಪ್ರಮುಖ ಬದಲಾವಣೆ:
- ತಾಂತ್ರಿಕ ವೃಂದ, ಲಿಪಿಕ ವೃಂದ ಹಾಗೂ ಸಹಾಯಕ ಸಿಬ್ಬಂದಿ ವೃಂದದ ಹುದ್ದೆಗಳಾದ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ, ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು (FDA) ಮತ್ತು ಶೀಘ್ರಲಿಪಿಗಾರರು ಹುದ್ದೆಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ತರಲಾಗಿದೆ:
- 5 ವರ್ಷಗಳಿಗೆ ಕಡಿಮೆಯಿಲ್ಲದ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡದ (ST) ಅಧಿಕಾರಿ/ನೌಕರರು ಲಭ್ಯವಿಲ್ಲದಿದ್ದಲ್ಲಿ, ಕನಿಷ್ಠ 3 ವರ್ಷಗಳ ಸೇವೆ ಸಲ್ಲಿಸಿರುವ ಸದರಿ ಪ್ರವರ್ಗದ ಅಧಿಕಾರಿ/ನೌಕರರನ್ನು ಮುಂಬಡ್ತಿಗೆ ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.
ಆಕ್ಷೇಪಣೆ / ಸಲಹೆ ಸಲ್ಲಿಸುವುದು ಹೇಗೆ?
ಈ ಕರಡು ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳಿದ್ದರೆ, ರಾಜ್ಯಪತ್ರ ಪ್ರಕಟವಾದ ದಿನಾಂಕದಿಂದ (18.11.2026) 15 ದಿನಗಳ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು:
ವಿಳಾಸ: ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ, ಬಹುಮಹಡಿಗಳ ಕಟ್ಟಡ (M.S. Building), ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು - 560 001.
ಕೃಷಿ ಪದವೀಧರರು ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯನ್ನು ಚುರುಕುಗೊಳಿಸಿ. ಅಂತಿಮ ನಿಯಮಾವಳಿ ಹಾಗೂ AO / AAO ನೇಮಕಾತಿ ಅಧಿಸೂಚನೆ ಪ್ರಕಟವಾದ ತಕ್ಷಣದ ನಿಖರ ಮಾಹಿತಿಗಾಗಿ KPSCVaani ಜಾಲತಾಣವನ್ನು ನಿರಂತರವಾಗಿ ಫಾಲೋ ಮಾಡಿ!
