➤ ಇತಿಹಾಸ ಮತ್ತು ಹಿನ್ನೆಲೆ:
- ಮೊದಲ ಯಶಸ್ವಿ ಮೂತ್ರಪಿಂಡ ಕಸಿ (1954): ಡಾ. ಜೋಸೆಫ್ ಮುರ್ರೆ (Dr. Joseph Murray) ಅವರು ಮೊದಲ ಬಾರಿಗೆ ಅವಳಿ ಸಹೋದರರ ನಡುವೆ ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.
- ಮೊದಲ ಯಶಸ್ವಿ ಹೃದಯ ಕಸಿ (1967): ದಕ್ಷಿಣ ಆಫ್ರಿಕಾದ ಡಾ. ಕ್ರಿಸ್ಟಿಯನ್ ಬರ್ನಾರ್ಡ್ (Dr. Christiaan Barnard) ಮಾನವನ ಮೊದಲ ಹೃದಯ ಕಸಿ ಮಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದರು.
- ಭಾರತದ ಮೈಲಿಗಲ್ಲು (ಆಗಸ್ಟ್ 3, 1994): ನವದೆಹಲಿಯ AIIMS ನಲ್ಲಿ ಡಾ. ಪಿ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಭಾರತದ ಮೊದಲ ಯಶಸ್ವಿ ಮರಣೋತ್ತರ ಹೃದಯ ಕಸಿ ನಡೆಯಿತು.
➤ ಕರ್ನಾಟಕದ ಐತಿಹಾಸಿಕ ಸಾಧನೆ ಮತ್ತು 'ಜೀವಸಾರ್ಥಕತೆ'
- ದಾಖಲೆಯ ಸಾಧನೆ (2025-2026): ಕರ್ನಾಟಕ ರಾಜ್ಯವು 'ಜೀವಸಾರ್ಥಕತೆ' ಸಂಸ್ಥೆಯ ಮೂಲಕ 198 ಅಂಗಾಂಗ ದಾನಿಗಳಿಂದ ಅಂಗಾಂಗ ಸಂಗ್ರಹಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕವು 3ನೇ ಸ್ಥಾನ ಪಡೆದುಕೊಂಡಿದೆ (ಮೊದಲ ಎರಡು ಸ್ಥಾನಗಳು: ತಮಿಳುನಾಡು ಮತ್ತು ತೆಲಂಗಾಣ).
- ಜೀವಸಾರ್ಥಕತೆ (SOTTO - Karnataka): ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುವ State Organ and Tissue Transplant Organisation (SOTTO) ಅನ್ನು ಕರ್ನಾಟಕದಲ್ಲಿ 'ಜೀವಸಾರ್ಥಕತೆ' ಎಂದು ಕರೆಯಲಾಗುತ್ತದೆ. ಇದು 'ಅಂಗಾಂಗ ಕಸಿ ಕಾಯ್ದೆ 1994' (Transplantation of Human Organs Act 1994) ನ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
- ಹಸಿರು ಕಾರಿಡಾರ್ (Green Corridor): ಮಿದುಳು ಸಾವು (Brain Death) ಸಂಭವಿಸಿದ ವ್ಯಕ್ತಿಯಿಂದ ಸಂಗ್ರಹಿಸಿದ ಅಂಗಾಂಗಗಳನ್ನು ನಿಗದಿತ ಸಮಯದೊಳಗೆ ಮತ್ತೊಂದು ಆಸ್ಪತ್ರೆಗೆ ತಲುಪಿಸಲು ಪೋಲಿಸ್ ಇಲಾಖೆಯ ನೆರವಿನಿಂದ 'ಗ್ರೀನ್ ಕಾರಿಡಾರ್' ಸಂಚಾರ ವ್ಯವಸ್ಥೆಯನ್ನು ಮಾಡಲಾಗುತ್ತದೆ.