* ICC ಮಹಿಳೆಯರ T20 ಅಂಡರ್-19 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಯುವತಿಯರು ಭರ್ಜರಿ ಗೆಲುವು ಪಡೆದು ಮತ್ತೊಮ್ಮೆ ವರ್ಲ್ಡ್ಕಪ್ಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತದ ವನಿತೆಯರು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
* ಕಳೆದ ಬಾರಿಯೂ ಭಾರತದ T20 ಅಂಡರ್-19 ವನಿತೆಯರು ಚಾಂಪಿಯನ್ ಆಗಿದ್ದರು. ಇನ್ನು ಭಾರತದ ವನಿತೆಯರು ಈ ಟೂರ್ನಿಯ ಆರಂಭದಿಂದಲೂ ಸೋಲನ್ನೇ ನೋಡಲಿಲ್ಲ ಎನ್ನುವುದು ವಿಶೇಷ.
* ಕೌಲಾಲಂಪುರ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ದಕ್ಷಿಣ ಆಫ್ರಿಕಾದ T20 ಅಂಡರ್-19 ತಂಡದ ನಾಯಕಿ ಕೈಲಾ ರೇನೆಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತೀಯ ವನಿತೆಯರು ಫೀಲ್ಡಿಂಗ್ಗೆ ಆಗಮಿಸಿದರು. ಇಂಗ್ಲೆಂಡ್ ವಿರುದ್ಧದ ಸೆಮಿಸ್ನಲ್ಲಿ ಬೌಲಿಂಗ್ನಲ್ಲಿ ಪರಾಕ್ರಮ ಮೆರೆದಿದ್ದ ಭಾರತದ ಯಂಗ್ ಗರ್ಲ್ಸ್ ದಕ್ಷಿಣ ಆಫ್ರಿಕಾ ವಿರುದ್ಧವೂ ಬೆಸ್ಟ್ ಬೌಲಿಂಗ್ ಮಾಡಿದರು. ಇದರಿಂದ ಆಫ್ರಿಕಾ ನಿಗದಿತ 20 ಓವರ್ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್ಗಳನ್ನು ಮಾತ್ರ ಗಳಿಸಿತು.
* ತಂಡದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
* 83 ರನ್ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಯುವತಿಯರು ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದರು. ಬೌಲಿಂಗ್ನಲ್ಲೂ ಮಿಂಚಿದ್ದ ಗೊಂಗಡಿ ತ್ರಿಷಾ ಬ್ಯಾಟಿಂಗ್ನಲ್ಲಿ 8 ಫೋರ್ ಸಮೇತ 44 ರನ್ ಸಿಡಿಸಿದರು. ಸಾನಿಕಾ ಚಲ್ಕೆ ಕೂಡ 26 ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.
* ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಯಾವುದನ್ನೂ ಸೋಲದೇ ವನಿತೆಯರು ಗೆದ್ದಿದ್ದಾರೆ. ಇನ್ನು ಗೊಂಗಡಿ ತ್ರಿಷಾ ಅವರು ಪ್ಲೇಯರ್ ಆಫ್ ದೀ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದೀ ಸೀರೀಸ್ ಪ್ರಶಸ್ತಿ ಪಡೆದುಕೊಂಡರು.
U19 Womens T20 World Cup : ಸತತ 2ನೇ ಬಾರಿ ವಿಶ್ವಕಪ್ ಗೆದ್ದ ಭಾರತದ ಯುವತಿಯರು
Published by Yallamma G
03 ಫೆಬ್ರವರಿ 2025