➤ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆ ಮತ್ತು ಪಶ್ಚಿಮ ಏಷ್ಯಾದಲ್ಲಿ (West Asia) ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ತನ್ನ ಇತಿಹಾಸದಲ್ಲೇ ಅತಿದೊಡ್ಡ ತುರ್ತು ತೈಲ ಬಿಡುಗಡೆಯನ್ನು ಘೋಷಿಸಿದೆ. ತನ್ನ 32 ಸದಸ್ಯ ರಾಷ್ಟ್ರಗಳ ವ್ಯೂಹಾತ್ಮಕ ಮೀಸಲು ಸಂಗ್ರಹದಿಂದ ಬರೋಬ್ಬರಿ 400 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು IEA ಅಧಿಕೃತವಾಗಿ ಸಮ್ಮತಿಸಿದೆ.
➤ ಈ ನಿರ್ಧಾರಕ್ಕೆ ಪ್ರಮುಖ ಕಾರಣ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ವಿಶೇಷವಾಗಿ ವಿಶ್ವದ ಅತಿ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ 'ಹಾರ್ಮುಜ್ ಜಲಸಂಧಿ' (Strait of Hormuz) ಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದು ಜಾಗತಿಕ ತೈಲ ಪೂರೈಕೆಗೆ ದೊಡ್ಡ ಹೊಡೆತ ನೀಡಿದೆ. ಈ ಅಡೆತಡೆಯಿಂದಾಗಿ ತೈಲ ಬೆಲೆ ಗಗನಕ್ಕೇರುವುದನ್ನು ತಡೆಯಲು ಮತ್ತು ಮಾರುಕಟ್ಟೆಯನ್ನು ಸ್ಥಿರಗೊಳಿಸಲು IEA ಈ ದಿಟ್ಟ ಹೆಜ್ಜೆ ಇಟ್ಟಿದೆ.
➤ IEA ತುರ್ತು ತೈಲ ಸಂಗ್ರಹದ ಕಾರ್ಯವೈಖರಿ:
- ಜಂಟಿ ಕಾರ್ಯಾಚರಣೆ: IEA ಸದಸ್ಯ ರಾಷ್ಟ್ರಗಳು ಭೂರಾಜಕೀಯ ಬಿಕ್ಕಟ್ಟುಗಳು ಅಥವಾ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಈ ತೈಲವನ್ನು ಸಂಗ್ರಹಿಸಿಟ್ಟಿರುತ್ತವೆ.
- ಸಂಗ್ರಹದ ಪ್ರಮಾಣ: ಪ್ರಸ್ತುತ IEA ಸದಸ್ಯ ರಾಷ್ಟ್ರಗಳ ಬಳಿ ಸುಮಾರು 1.2 ಬಿಲಿಯನ್ ಬ್ಯಾರೆಲ್‌ಗಳಷ್ಟು ಸಾರ್ವಜನಿಕ ತುರ್ತು ತೈಲ ಸಂಗ್ರಹವಿದೆ. ಇದರ ಜೊತೆಗೆ ಖಾಸಗಿ ಉದ್ಯಮಗಳ ಬಳಿ ಅಂದಾಜು 600 ಮಿಲಿಯನ್ ಬ್ಯಾರೆಲ್ ತೈಲ ಮೀಸಲಿದೆ.
- ಸುರಕ್ಷತಾ ಕವಚ: ಪೂರೈಕೆಯಲ್ಲಿ ಹಠಾತ್ ಕುಸಿತ ಉಂಟಾದಾಗ ಈ ಮೀಸಲು ತೈಲವು ಜಾಗತಿಕ ಆರ್ಥಿಕತೆಗೆ 'ಬಫರ್' (Buffer) ರೀತಿ ಕೆಲಸ ಮಾಡುತ್ತದೆ.
➤ ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) :
- ಸ್ಥಾಪನೆ: 1974 (ಜಾಗತಿಕ ತೈಲ ಬಿಕ್ಕಟ್ಟಿನ ನಂತರ).
- ಕೇಂದ್ರ ಕಚೇರಿ: ಪ್ಯಾರಿಸ್, ಫ್ರಾನ್ಸ್.
- ಉದ್ದೇಶ: ಇಂಧನ ಭದ್ರತೆ, ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವುದು.
- ಸದಸ್ಯತ್ವ: ಭಾರತವು IEA ನ 'ಸಹಯೋಗಿ ಸದಸ್ಯ' (Associate Member) ರಾಷ್ಟ್ರವಾಗಿದೆ.
ಗುರುವಾರ, 12 ಮಾರ್ಚ್ 2026
12:06 ಅಪರಾಹ್ನ
Daily PDF
IEA ಇತಿಹಾಸದಲ್ಲೇ ಅತಿದೊಡ್ಡ ತೈಲ ಬಿಡುಗಡೆ: 400 ಮಿಲಿಯನ್ ಬ್ಯಾರೆಲ್ ತುರ್ತು ತೈಲ ಸಂಗ್ರಹ ಮುಕ್ತಕ್ಕೆ ನಿರ್ಧಾರ
Authored by:
Akshata Halli