➤ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆ (National Teachers' Day) ಯನ್ನಾಗಿ ಆಚರಿಸಲಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಅಪ್ರತಿಮ ಸೇವೆಯನ್ನು ಸ್ಮರಿಸಲು ಮತ್ತು ಗೌರವಿಸಲು ಈ ದಿನ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
➤ ಭಾರತದ ಪ್ರಸಿದ್ಧ ವಿದ್ವಾಂಸ, ತತ್ವಜ್ಞಾನಿ, ಪ್ರಥಮ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr. Sarvepalli Radhakrishnan) ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಈ ದಿನವನ್ನು ಆಚರಿಸಲಾಗುತ್ತದೆ.
➤ 1962 ರಲ್ಲಿ ಡಾ. ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದಾಗ, ಅವರ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಅವರ ಜನ್ಮದಿನವನ್ನು ಆಚರಿಸಲು ಅನುಮತಿ ಕೋರಿದರು. ಆಗ ಅವರು, "ನನ್ನ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸುವ ಬದಲು, ದೇಶದ ಎಲ್ಲಾ ಶಿಕ್ಷಕರ ಗೌರವಾರ್ಥವಾಗಿ 'ಶಿಕ್ಷಕರ ದಿನ'ವಾಗಿ ಆಚರಿಸಿದರೆ ನನಗೆ ಹೆಮ್ಮೆ" ಎಂದು ಸಲಹೆ ನೀಡಿದರು. ಅವರ ಈ ಕೋರಿಕೆಯಂತೆ 1962 ಸೆಪ್ಟೆಂಬರ್ 5 ರಿಂದ ದೇಶಾದ್ಯಂತ ಅಧಿಕೃತವಾಗಿ ಶಿಕ್ಷಕರ ದಿನಾಚರಣೆ ಪ್ರಾರಂಭವಾಯಿತು.
➤ ಡಾ. ಸರ್ವಪಲ್ಲಿ ರಾಧಾಕೃಷ್ಣನ್:
- ಭಾರತದ ಪ್ರಥಮ ಉಪರಾಷ್ಟ್ರಪತಿ: (1952 – 1962)
- ಭಾರತದ ಎರಡನೇ ರಾಷ್ಟ್ರಪತಿ: (1962 – 1967)
- ಭಾರತರತ್ನ ಪ್ರಶಸ್ತಿ: 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ'ಕ್ಕೆ ಭಾಜನರಾದರು (ಸಿ. ರಾಜಗೋಪಾಲಚಾರಿ ಮತ್ತು ಸಿ.ವಿ. ರಾಮನ್ ಅವರೊಂದಿಗೆ).
ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆ: ಆಂಧ್ರ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳಲ್ಲಿ (BHU) ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
➤ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ: ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಭಾರತದ ಶಿಕ್ಷಣ ಸಚಿವಾಲಯವು ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ' ನೀಡಿ ಗೌರವಿಸುತ್ತದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಯವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ.
➤ ಶಿಕ್ಷಕರ ದಿನಾಚರಣೆಯ (ಸೆಪ್ಟೆಂಬರ್ 5) ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಸಾಲಿನಲ್ಲಿ ರಾಜ್ಯದಾದ್ಯಂತ ಆಯ್ಕೆಯಾದ ಒಟ್ಟು 41 ಜನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ (PU) ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
- ಸಾವಿತ್ರಿಬಾಯಿ ಫುಲೆ ಪ್ರಶಸ್ತಿ: ಮಹಿಳಾ ಶಿಕ್ಷಕಿಯರಿಗೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾಮಾಜಿಕ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
- ಪ್ರದಾನ ಸಮಾರಂಭ: ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಈ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
➤ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026ನೇ ಸಾಲಿನ 'ಮಲೆನಾಡ ಗಾಂಧಿ ಹೆಚ್.ಜಿ. ಗೋವಿಂದೇಗೌಡ ಉತ್ತಮ ಶಾಲೆ ಪ್ರಶಸ್ತಿ'ಗೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಕಟ್ಟಿ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿದೆ.
ಶನಿವಾರ, 05 ಸೆಪ್ಟೆಂಬರ್ 2026
10:31 ಪೂರ್ವಾಹ್ನ
Daily PDF
ಸೆಪ್ಟೆಂಬರ್ 5: ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
Authored by:
Akshata Halli