➤ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಾಗರ ವಲಯವು ಕಳೆದ ಒಂದು ದಶಕದಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸಾಗರಮಾಲಾ' (Sagarmala Project) ಯೋಜನೆಯು ದೇಶದ ಬಂದರುಗಳ ಮುಖಪುಟವನ್ನೇ ಬದಲಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ವ್ಯಾಪಾರ ಸಾಮರ್ಥ್ಯವನ್ನು ಹೆಚ್ಚಿಸಿದೆ.
➤ಹೂಡಿಕೆ ಮತ್ತು ಯೋಜನೆಗಳ ವಿವರ: ಸಾಗರಮಾಲಾ ಯೋಜನೆಯಡಿ ಒಟ್ಟು ₹6.06 ಲಕ್ಷ ಕೋಟಿ ವೆಚ್ಚದ 845 ಯೋಜನೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 2026ರ ಮಾರ್ಚ್ ಅಂತ್ಯದ ವೇಳೆಗೆ ₹1.57 ಲಕ್ಷ ಕೋಟಿ ಮೌಲ್ಯದ 315 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಉಳಿದವು ಅನುಷ್ಠಾನದ ವಿವಿಧ ಹಂತಗಳಲ್ಲಿದ್ದು, ವಿಶೇಷವಾಗಿ 2025ರ ಮಾರ್ಚ್‌ನಲ್ಲಿ ಚಾಲನೆ ನೀಡಲಾದ 'ಸಾಗರಮಾಲಾ 2.0' ಹಂತದ ಮೂಲಕ ಹೆಚ್ಚುವರಿಯಾಗಿ ₹3.6 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
➤ ದಾಖಲೆಯ ಸರಕು ನಿರ್ವಹಣೆ (Cargo Handling): ಭಾರತದ ಪ್ರಮುಖ ಬಂದರುಗಳು 2025-26ರ ಹಣಕಾಸು ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ನಿಗದಿಪಡಿಸಿದ್ದ 904 ಮಿಲಿಯನ್ ಟನ್ ಗುರಿಯನ್ನು ಮೀರಿ ದಾಖಲೆಯ 915.17 ಮಿಲಿಯನ್ ಟನ್ ಸರಕನ್ನು ನಿರ್ವಹಿಸಿವೆ. ಇದು ವಾರ್ಷಿಕವಾಗಿ ಶೇ. 7.06ರಷ್ಟು ಗಮನಾರ್ಹ ಬೆಳವಣಿಗೆಯನ್ನು ಪ್ರತಿಬಿಂಬಿಸುವುದಲ್ಲದೆ, ದೇಶದ ಬಂದರುಗಳ ಕಾರ್ಯನಿರ್ವಹಣಾ ದಕ್ಷತೆಗೆ ಸಾಕ್ಷಿಯಾಗಿದೆ. ಈ ಅತ್ಯುತ್ತಮ ಸಾಧನೆಯಿಂದಾಗಿ ಇಂದು ವಿಶ್ವದ ಅಗ್ರ 100 ಬಂದರುಗಳ ಪಟ್ಟಿಯಲ್ಲಿ ಭಾರತದ 9 ಬಂದರುಗಳು ಸ್ಥಾನ ಪಡೆಯುವ ಮೂಲಕ ಜಾಗತಿಕ ಭೂಪಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿವೆ.
➤ ಒಳನಾಡು ಜಲಮಾರ್ಗಗಳ ಅಭಿವೃದ್ಧಿ: ಸರಕು ಸಾಗಣೆಯಲ್ಲಿ ರಸ್ತೆ ಮತ್ತು ರೈಲ್ವೆ ಮೇಲಿನ ಒತ್ತಡ ಕಡಿಮೆ ಮಾಡಲು ಜಲಮಾರ್ಗಗಳಿಗೆ ಆದ್ಯತೆ ನೀಡಲಾಗಿದೆ: 2013-14ರಲ್ಲಿ ಕೇವಲ 18.10 ಮಿಲಿಯನ್ ಟನ್ ಇದ್ದ ಒಳನಾಡು ಜಲಮಾರ್ಗ ಸಾಗಣೆ, 2024-25ರ ವೇಳೆಗೆ 145.50 ಮಿಲಿಯನ್ ಟನ್ ಗೆ ಏರಿಕೆಯಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಶೇಕಡಾ 700ರಷ್ಟು ಭಾರಿ ಪ್ರಗತಿಯನ್ನು ದಾಖಲಿಸಿದೆ.
➤ ಕರಾವಳಿ ಸಮುದಾಯದ ಅಭಿವೃದ್ಧಿ: ಸಾಗರಮಾಲಾ ಕೇವಲ ಬಂದರುಗಳಿಗೆ ಸೀಮಿತವಾಗಿಲ್ಲ, ಇದು ಕರಾವಳಿ ಜನರ ಬದುಕನ್ನೂ ಹಸನುಗೊಳಿಸಿದೆ: 1,057 ಕೋಟಿ ರೂಪಾಯಿ ವೆಚ್ಚದಲ್ಲಿ 11 ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಗಳಿಂದ ಸುಮಾರು 30,000ಕ್ಕೂ ಹೆಚ್ಚು ಮೀನುಗಾರರಿಗೆ ನೇರ ಲಾಭವಾಗಿದೆ.
➤ ಸಾಗರಮಾಲಾ ಯೋಜನೆಯ ಪ್ರಮುಖ ನಾಲ್ಕು ಸ್ತಂಭಗಳು (Pillars):
1.ಬಂದರು ಆಧುನೀಕರಣ : ಹಳೆಯ ಬಂದರುಗಳ ಸಾಮರ್ಥ್ಯ ಹೆಚ್ಚಳ ಮತ್ತು ಹೊಸ ಬಂದರುಗಳ ನಿರ್ಮಾಣ.
2.ಸಂಪರ್ಕ ಅಭಿವೃದ್ಧಿ : ಬಂದರುಗಳನ್ನು ರೈಲ್ವೆ ಮತ್ತು ರಸ್ತೆಗಳಿಗೆ ಜೋಡಿಸುವುದು.
3.ಬಂದರು ಆಧಾರಿತ ಕೈಗಾರಿಕೀಕರಣ : ಬಂದರುಗಳ ಸಮೀಪವೇ ಕೈಗಾರಿಕಾ ವಲಯಗಳ ಸ್ಥಾಪನೆ.
4.ಕರಾವಳಿ ಸಮುದಾಯ ಅಭಿವೃದ್ಧಿ : ಕರಾವಳಿ ಜನರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸುಧಾರಣೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.