➤ ಸಂಸತ್ತಿನ ಎರಡೂ ಮನೆಗಳು (ಲೋಕಸಭೆ ಮತ್ತು ರಾಜ್ಯಸಭೆ) ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 (Mines and Minerals Development and Regulation - MMDR Amendment Bill, 2026) ಅನ್ನು ಯಶಸ್ವಿಯಾಗಿ ಅಂಗೀಕರಿಸಿವೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಜಿ. ಕಿಷನ್ ರೆಡ್ಡಿ ಅವರು ಆಗಸ್ಟ್ 10, 2026 ರಂದು ಲೋಕಸಭೆಯಲ್ಲಿ ಮಂಡಿಸಿದ ಈ ವಿಧೇಯಕಕ್ಕೆ ಆಗಸ್ಟ್ 12 ರಂದು ಲೋಕಸಭೆ ಹಾಗೂ ಆಗಸ್ಟ್ 13, 2026 ರಂದು ರಾಜ್ಯಸಭೆ ಅನುಮೋದನೆ ನೀಡಿದೆ. ಸಂವಿಧಾನದ ವಿಧಿ 111 ರ ಅಡಿಯಲ್ಲಿ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಇದು ಕಾಯಿದೆಯಾಗಿ ಜಾರಿಗೆ ಬರಲಿದೆ.
➤ MMDR ತಿದ್ದುಪಡಿ ವಿಧೇಯಕ 2026:

1.ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರಕ್ಕೆ ನಿರ್ಬಂಧ (ಸೆಕ್ಷನ್ 9D ಸೇರ್ಪಡೆ)
  • ಹೊಸ ಸೆಕ್ಷನ್ 9D: ಮೂಲ ಕಾಯಿದೆಗೆ ಹೊಸ ಸೆಕ್ಷನ್ 9D ಅನ್ನು ಸೇರಿಸಲಾಗಿದ್ದು, ಇದರ ಪ್ರಕಾರ ರಾಜ್ಯ ಸರ್ಕಾರಗಳು ಖನಿಜ ಹಕ್ಕುಗಳು (Mineral Rights) ಅಥವಾ ಖನಿಜಯುಕ್ತ ಭೂಮಿಯ ಮೇಲಿನ ತೆರಿಗೆ, ಸೆಸ್ (Cess) ಅಥವಾ ಹೆಚ್ಚುವರಿ ಸುಂಕಗಳನ್ನು ಕೇಂದ್ರದ ಮಾರ್ಗದರ್ಶಿ ಸೂತ್ರಗಳಿಲ್ಲದೆ ಸ್ವತಂತ್ರವಾಗಿ ವಿಧಿಸುವಂತಿಲ್ಲ.
  • ಕೇಂದ್ರದ ನಿಯಂತ್ರಣ: ಖನಿಜ ಉತ್ಪಾದನೆ, ಮೌಲ್ಯ ಅಥವಾ ರಾಯಲ್ಟಿ ಆಧಾರದ ಮೇಲೆ ರಾಜ್ಯಗಳು ವಿಧಿಸುವ ತೆರಿಗೆಗಳ ಮೇಲೆ ಕೇಂದ್ರ ಸರ್ಕಾರವು ಸಾರ್ವತ್ರಿಕ ನಿಯಂತ್ರಣ ಹೊಂದಿರಲಿದೆ.
2. ಬಾಕಿ ತೆರಿಗೆ ರದ್ದತಿ (Unrecovered Dues Invalidation)
  • ತಿದ್ದುಪಡಿ ಕಾಯಿದೆ ಜಾರಿಗೆ ಬರುವ ಮೊದಲು ರಾಜ್ಯ ಸರ್ಕಾರಗಳು ವಿಧಿಸಿದ, ಆದರೆ ಇದುವರೆಗೆ ವಸೂಲಿಯಾಗದ ಅಥವಾ ಜಮೆಯಾಗದ ಹಳೆಯ ತೆರಿಗೆ ಬಾಕಿಗಳನ್ನು (Unrecovered/Unpaid Dues) ಈ ಕಾಯಿದೆ ರದ್ದುಗೊಳಿಸುತ್ತದೆ.
  • ಆದರೆ, ಈಗಾಗಲೇ ಕಂಪನಿಗಳು ಅಥವಾ ಗಣಿಗಾರಿಕೆ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಪಾವತಿಸಿರುವ ತೆರಿಗೆ ಹಣವನ್ನು ಹಿಂತಿರುಗಿಸುವ ಅಗತ್ಯವಿರುವುದಿಲ್ಲ.
3. ಖನಿಜಯುಕ್ತ ಭೂಮಿಯ ನಿಯಂತ್ರಣ (Mineral-bearing Lands Control)
  • ಈವರೆಗೂ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜ ಅಭಿವೃದ್ಧಿಯ ನಿಯಂತ್ರಣ ಹೊಂದಿತ್ತು. ಆದರೆ, ಈ ಹೊಸ ವಿಧೇಯಕದ ಮೂಲಕ ಖನಿಜಯುಕ್ತ ಭೂಮಿಗಳ (Mineral-bearing lands) ಮೇಲೆಯೂ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುವ ಅಧಿಕಾರ ಪಡೆದಿದೆ.
4. ನಿರ್ಣಾಯಕ ಖನಿಜಗಳು ಹಾಗೂ ಕ್ಯಾಪ್ಟಿವ್ ಗಣಿಗಳಿಗೆ ವಿನಾಯಿತಿ
  • ಮಲ್ಟಿ-ಮಿನರಲ್ ಗುತ್ತಿಗೆ (Multi-mineral leasing): ಪ್ರಸ್ತುತ ಇರುವ ಗಣಿ ಗುತ್ತಿಗೆದಾರರು ಹೆಚ್ಚುವರಿ ಶುಲ್ಕ ಪಾವತಿಸದೆ ಲೀಥಿಯಂ (Lithium), ಕೋಬಾಲ್ಟ್ (Cobalt), ಗ್ರ್ಯಾಫೈಟ್, ಚಿನ್ನ ಮತ್ತು ಬೆಳ್ಳಿಯಂತಹ ನಿರ್ಣಾಯಕ ಹಾಗೂ ಆಯಕಟ್ಟಿನ ಖನಿಜಗಳನ್ನು (Critical Minerals) ಹೊರತೆಗೆಯಲು ಅವಕಾಶ ಕಲ್ಪಿಸಲಾಗಿದೆ.
  • ಕ್ಯಾಪ್ಟಿವ್ ಗಣಿಗಳ ಮೇಲಿನ ಮಿತಿ ರದ್ದು: ಸ್ವಂತ ಕೈಗಾರಿಕಾ ಬಳಕೆಗೆ ಮೀಸಲಾದ ಕ್ಯಾಪ್ಟಿವ್ ಗಣಿಗಳಿಂದ (Captive Mines) ಖನಿಜಗಳನ್ನು ಹೊರಗಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೇಲಿದ್ದ ಮಿತಿಯನ್ನು ತೆರವುಗೊಳಿಸಲಾಗಿದೆ.