➤ ಇಡೀ ಅಕ್ಟೋಬರ್ ತಿಂಗಳನ್ನು 'ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸ' (Breast Cancer Awareness Month) ಎಂದು ಆಚರಿಸಲಾಗುತ್ತದೆ. ಈ ಸುದೀರ್ಘ ಜಾಗೃತಿ ಅಭಿಯಾನದಲ್ಲಿ ಅತ್ಯಂತ ನಿರ್ಣಾಯಕ ಮತ್ತು ಪ್ರಾಮುಖ್ಯತೆಯ ದಿನವೆಂದರೆ ಅಕ್ಟೋಬರ್ 13. ಈ ದಿನವನ್ನು 'ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಜಾಗೃತಿ ದಿನ' (Metastatic Breast Cancer Awareness Day) ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.ನಾಲ್ಕನೇ ಹಂತದ (Stage 4) ಅತ್ಯಂತ ತೀವ್ರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಧ್ವನಿಯಾಗಲು, ಅವರ ಸವಾಲುಗಳು ಮತ್ತು ಅಗತ್ಯತೆಗಳನ್ನು ಜಗತ್ತಿಗೆ ತಿಳಿಸಲು ಈ ದಿನವನ್ನು ಮೀಸಲಿಡಲಾಗಿದೆ.
➤ ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ದಿನದ ಇತಿಹಾಸ (History of MBC Day): ಅಮೆರಿಕದ 'ಮೆಟಾಸ್ಟಾಟಿಕ್ ಬ್ರೆಸ್ಟ್ ಕ್ಯಾನ್ಸರ್ ನೆಟ್‌ವರ್ಕ್' (MBCN) ಮತ್ತು ರೋಗಿಗಳ ಹಕ್ಕುಗಳ ಕಾರ್ಯಕರ್ತರ ಸುದೀರ್ಘ ಹೋರಾಟದ ಫಲವಾಗಿ 2009ರಲ್ಲಿ ಅಮೆರಿಕದ ಸೆನೆಟ್ ಮತ್ತು ಜನಪ್ರತಿನಿಧಿಗಳ ಸಭೆಯು ಅಕ್ಟೋಬರ್ 13 ಅನ್ನು ಅಧಿಕೃತವಾಗಿ 'ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಜಾಗೃತಿ ದಿನ' ಎಂದು ಘೋಷಿಸಿತು. ಸಾಮಾನ್ಯ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಗಳಲ್ಲಿ ಹಂತ-4ರ ರೋಗಿಗಳ ಸಮಸ್ಯೆಗಳು ನಿರ್ಲಕ್ಷಿಸಲ್ಪಡುತ್ತಿವೆ ಎಂಬ ಕಾರಣಕ್ಕೆ ಈ ಪ್ರತ್ಯೇಕ ದಿನದ ಅಗತ್ಯತೆ ಉದ್ಭವಿಸಿತು.
➤ ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ : ಸಾಮಾನ್ಯ ಸ್ತನ ಕ್ಯಾನ್ಸರ್ ರೋಗವು ಸ್ತನದ ಅಂಗಾಂಶಗಳಿಗೆ ಅಥವಾ ಹತ್ತಿರದ ದುಗ್ಧರಸ ಗ್ರಂಥಿಗಳಿಗೆ (Lymph Nodes) ಮಾತ್ರ ಸೀಮಿತವಾಗಿರುತ್ತದೆ. ಆದರೆ, 'ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್' (Stage 4 Cancer) ಎಂಬುದು ಕ್ಯಾನ್ಸರ್ ಕೋಶಗಳು ಪ್ರಾಥಮಿಕ ಸ್ಥಳದಿಂದ (ಸ್ತನದಿಂದ) ರಕ್ತನಾಳಗಳು ಅಥವಾ ದುಗ್ಧನಾಳಗಳ ಮೂಲಕ ದೇಹದ ಇತರ ಭಾಗಗಳಿಗೆ ಹರಡುವ ಹಂತವಾಗಿದೆ.
- ಇದು ಸಾಮಾನ್ಯವಾಗಿ ಶ್ವಾಸಕೋಶ, ಯಕೃತ್ತು (Liver), ಮೂಳೆಗಳು ಮತ್ತು ಮೆದುಳಿನಂತಹ ಪ್ರಮುಖ ಅಂಗಗಳಿಗೆ ಹರಡುತ್ತದೆ.
- ಇದು ಸ್ತನ ಕ್ಯಾನ್ಸರ್‌ನ ಅತ್ಯಂತ ಅಪಾಯಕಾರಿ ಹಾಗೂ ಮಾರಣಾಂತಿಕ ರೂಪವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಧೈಯವಾಕ್ಯ 2026: "ಪ್ರತಿಯೊಬ್ಬರ ಬದುಕಿನ ಕಥೆಯೂ ವಿಭಿನ್ನ, ಪ್ರತಿಯೊಂದು ಪಯಣವೂ ಅಮೂಲ್ಯ"
➤ ಭಾರತದಲ್ಲಿ ಸ್ತನ ಕ್ಯಾನ್ಸರ್ ಸ್ಥಿತಿಗತಿ (Breast Cancer Statistics in India): ಭಾರತೀಯ ಮಹಿಳೆಯರಲ್ಲಿ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ಎಂದರೆ ಅದು ಸ್ತನ ಕ್ಯಾನ್ಸರ್.
- ICMR (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಅಂದಾಜಿನ ಪ್ರಕಾರ, 2024ರಲ್ಲಿ ಭಾರತದಲ್ಲಿ ಸುಮಾರು 2.27 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.
- ಪ್ರಮುಖ ಕಾರಣಗಳು: ಹೆಚ್ಚುತ್ತಿರುವ ವಯಸ್ಸು, ಬೊಜ್ಜು (Obesity), ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಅನುವಂಶಿಕ ಕಾರಣಗಳು.
➤ ಪ್ರಮುಖ ಲಕ್ಷಣಗಳು:
1. ಸ್ತನ ಅಥವಾ ಕಂಕಳ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು.
2. ಸ್ತನದ ಗಾತ್ರ ಮತ್ತು ಆಕಾರದಲ್ಲಿ ದಿಢೀರ್ ಬದಲಾವಣೆ.
3. ಚರ್ಮದಲ್ಲಿ ಸುಕ್ಕು, ಕೆಂಪು ಬಣ್ಣ ಅಥವಾ ಬದಲಾವಣೆ.
4. ತೊಟ್ಟುಗಳಿಂದ (Nipple) ಅಸಹಜ ರಕ್ತ ಅಥವಾ ದ್ರವ ಸ್ರಾವ.
➤ ಭಾರತ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಗಳು ಹಾಗೂ ಜಾಗೃತಿ: ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ:
1. ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆ ಕಾರ್ಯಕ್ರಮ (NP-NCD):
- ಈ ಯೋಜನೆಯಡಿ 30 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಸ್ತನ, ಗರ್ಭಕಂಠ (Cervical) ಮತ್ತು ಬಾಯಿ ಕ್ಯಾನ್ಸರ್ ಉಚಿತ ತಪಾಸಣೆಗೆ ಆದ್ಯತೆ ನೀಡಲಾಗಿದೆ.
- ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಂತೆ 16.24 ಕೋಟಿಗೂ ಹೆಚ್ಚು ಸ್ತನ ಕ್ಯಾನ್ಸರ್ ತಪಾಸಣೆಗಳನ್ನು ನಡೆಸಲಾಗಿದ್ದು, ಸಾವಿರಾರು ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲಾಗಿದೆ.
2. ಆಶಾ ಮತ್ತು ಆರೋಗ್ಯ ಕಾರ್ಯಕರ್ತರ ಪಾತ್ರ:
- ಗ್ರಾಮ ಮಟ್ಟದಲ್ಲಿ ಆಶಾ (ASHA) ಕಾರ್ಯಕರ್ತೆಯರು ಮತ್ತು ನರ್ಸ್‌ಗಳು ಸಾರ್ವಜನಿಕರಿಗೆ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
- ಪ್ರಾಥಮಿಕ ಹಂತದಲ್ಲೇ ರೋಗಿಗಳನ್ನು ಗುರುತಿಸಿ ಮೇಲ್ಮಟ್ಟದ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ.
3. ಜಾಗೃತಿ ಕಾರ್ಯಕ್ರಮಗಳು:
- ಸಾರ್ವಜನಿಕ ಆರೋಗ್ಯ ಶಿಬಿರಗಳು, ಜಾಗೃತಿ ಜಾಥಾಗಳು ಮತ್ತು ಉಚಿತ ಸ್ಕ್ರೀನಿಂಗ್ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ.
ಅಕ್ಟೋಬರ್ 13: ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಜಾಗೃತಿ ದಿನ
Published by Akshata Halli
2 hours ago