➤ ಕರ್ನಾಟಕದಲ್ಲಿ ಇತ್ತೀಚೆಗೆ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ (Bedti-Varada River Interlinking Project) ತೀವ್ರ ಚರ್ಚೆಗೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಉತ್ತರ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈ ಯೋಜನೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
➤ ಯೋಜನೆಯ ಪರಿಚಯ ಹಾಗೂ ಹಿನ್ನೆಲೆ:
- ಅನುಷ್ಠಾನ ಸಂಸ್ಥೆ: ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA - National Water Development Agency).
- ಮೂಲ ಉದ್ದೇಶ: ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಬೇಡ್ತಿ (ಗಂಗಾವಳಿ) ನದಿಯ ಹೆಚ್ಚುವರಿ ನೀರನ್ನು, ಪೂರ್ವಕ್ಕೆ ಹರಿದು ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾವನ್ನು ಸೇರುವ ವರದಾ ನದಿಗೆ ತಿರುಗಿಸುವುದು.
- ಉದ್ದೇಶಿತ ಪ್ರದೇಶಗಳು: ಉತ್ತರ ಕರ್ನಾಟಕದ ಶುಷ್ಕ/ಬಯಲುಸೀಮೆ ಜಿಲ್ಲೆಗಳಾದ ಹಾವೇರಿ, ಗದಗ, ರಾಯಚೂರು, ಕೊಪ್ಪಳ, ಶಿವಮೊಗ್ಗ ಜಿಲ್ಲೆಗಳ ಕುಡಿಯುವ ನೀರು ಹಾಗೂ ಸುಮಾರು ೧.೦೬ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವುದು.
- ಯೋಜನೆಯ ಸ್ವರೂಪ: ಶಿರಸಿಯ ಮೆಣಸಗೋಡದ ಬಳಿ ಪಟ್ಟಣದಹಳ್ಳಕ್ಕೆ ಮತ್ತು ಶಾಲಮಲಾ ಹಳ್ಳಕ್ಕೆ ಬ್ಯಾರೇಜ್‌ಗಳು ಹಾಗೂ ಸುಮಾರು ೬.೭ ಕಿ.ಮೀ.ಗಿಂತಲೂ ದೀರ್ಘ ಸುರಂಗ ಮಾರ್ಗ ಮತ್ತು ಎತ್ತುವಳಿ (Lift Irrigation) ವ್ಯವಸ್ಥೆಯ ಮೂಲಕ ನೀರನ್ನು ಹಕ್ಕಲುಮನೆ ಬಳಿ ವರದಾ ನದಿಗೆ ಹರಿಸಲು ಉದ್ದೇಶಿಸಲಾಗಿದೆ.
➤ ಭೌಗೋಳಿಕ ಮತ್ತು ತಾಂತ್ರಿಕ ಸವಾಲುಗಳು:
- ನದಿಗಳ ಸ್ವರೂಪ: ಬೇಡ್ತಿ ಮತ್ತು ವರದಾ ಎರಡೂ ಮಳೆಯಾಶ್ರಿತ (Rain-fed) ನದಿಗಳಾಗಿದ್ದು, ಶೇ. 70-80 ರಷ್ಟು ನೀರು ಕೇವಲ ಮುಂಗಾರು ಅವಧಿಯಲ್ಲಿ ಹರಿಯುತ್ತದೆ. ಬೇಸಿಗೆಯಲ್ಲಿ ಇವುಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
- ನೈಜ ನೀರಿನ ಲಭ್ಯತೆಯ ಸಂಶಯ: 'ಹೆಚ್ಚುವರಿ ನೀರು' ಲಭ್ಯವಿದೆ ಎಂಬ ವರದಿಗೆ ವೈಜ್ಞಾನಿಕ ಆಧಾರವಿಲ್ಲ ಹಾಗೂ ನಿಖರ ಅಧ್ಯಯನ ನಡೆದಿಲ್ಲ ಎಂಬುದು ತಜ್ಞರ ಅಭಿಪ್ರಾಯ.
- ಎತ್ತುವಳಿ ನೀರಾವರಿ ಮತ್ತು ವಿದ್ಯುತ್ ಅಗತ್ಯ: ಪಶ್ಚಿಮ ಘಟ್ಟಗಳ ಕಡಿದಾದ ಪ್ರದೇಶದಿಂದ ನೀರನ್ನು ಪೂರ್ವ ಭಾಗಕ್ಕೆ ಪಂಪ್ ಮಾಡಲು ಹಾಗೂ ಸುರಂಗಗಳ ಮೂಲಕ ಸಾಗಿಸಲು ಅಪಾರ ಪ್ರಮಾಣದ ವಿದ್ಯುತ್ ಶಕ್ತಿ ಅಗತ್ಯವಿದೆ.
➤ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳು :
- ದಟ್ಟ ಅರಣ್ಯ ನಾಶ: ಯೋಜನೆಯ ಅನುಷ್ಠಾನಕ್ಕಾಗಿ ನೂರಾರು ಹೆಕ್ಟೇರ್ ದಟ್ಟವಾದ ನಿತ್ಯಹರಿದ್ವರ್ಣ (Evergreen Forest) ಅರಣ್ಯ ಮುಳುಗಡೆಯಾಗುವ ಹಾಗೂ ಮರಗಳನ್ನು ಕಡಿಯುವ ಅಪಾಯವಿದೆ.
- ಜೀವವೈವಿಧ್ಯತೆಗೆ ಧಕ್ಕೆ: ಬೇಡ್ತಿ ಕಣಿವೆಯು IUCN ನಿಂದ ಸಕ್ರಿಯ ಜೀವವೈವಿಧ್ಯ ವಲಯವೆಂದು ಗುರುತಿಸಲ್ಪಟ್ಟಿದ್ದು, ಅಪರೂಪದ ಸಸ್ಯ ಹಾಗೂ ಪ್ರಾಣಿ ತಳಿಗಳಿಗೆ ಆಸರೆಯಾಗಿದೆ.
- ಉಪ್ಪು ನೀರು ನುಗ್ಗುವಿಕೆ: ಕರಾವಳಿಯ ನದಿಮುಖಜ ಭೂಮಿಯಲ್ಲಿ ಸಿಹಿ ನೀರಿನ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪು ನೀರು ಒಳನುಗ್ಗಿ ಕೃಷಿ ಹಾಗೂ ಕುಡಿಯುವ ನೀರಿನ ಜಲಾಶಯಗಳು ಹಾಳಾಗುವ ಭೀತಿಯಿದೆ.
- ಸಮುದಾಯಗಳ ಮೇಲಿನ ಪರಿಣಾಮ: ಅರಣ್ಯಾಧಾರಿತ ಮತ್ತು ಪಾರಂಪರಿಕ ಸಮುದಾಯಗಳಾದ ಗೌಳಿ, ಸಿದ್ವಿ, ಕುಣಬಿ, ಹಾಲಕ್ಕಿ ಹಾಗೂ ಸ್ಥಳೀಯ ಮೀನುಗಾರರ ಜೀವನೋಪಾಯಕ್ಕೆ ಭಾರಿ ಪೆಟ್ಟು ಬೀಳಲಿದೆ.
- ಭೂಕುಸಿತ ಮತ್ತು ಮಾನವ-ವನ್ಯಜೀವಿ ಸಂಘರ್ಷ: ಪಶ್ಚಿಮ ಘಟ್ಟಗಳಲ್ಲಿ ಸುರಂಗ ತೋಡುವುದು ಹಾಗೂ ಕಾಡು ನಾಶ ಮಾಡುವುದರಿಂದ ಭೂಕುಸಿತಗಳು ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲಿದೆ.