➤ ಜರ್ಮನಿಯು ಭಾರತೀಯ ನಾಗರಿಕರಿಗೆ ಮಹತ್ವದ ಸಡಿಲಿಕೆ ಘೋಷಿಸಿದ್ದು, ಜರ್ಮನ್ ವಿಮಾನ ನಿಲ್ದಾಣಗಳ ಅಂತರರಾಷ್ಟ್ರೀಯ ಟ್ರಾನ್ಸಿಟ್ ವಲಯದ ಮೂಲಕ ಪ್ರಯಾಣಿಸುವ ಸಂದರ್ಭದಲ್ಲಿ ಇನ್ನು ಮುಂದೆ ಎರ್‌ಪೋರ್ಟ್ ಟ್ರಾನ್ಸಿಟ್ ವೀಸಾ ಅಗತ್ಯವಿರುವುದಿಲ್ಲ ಎಂದು ಪ್ರಕಟಿಸಿದೆ. ಈ ನಿರ್ಧಾರವು ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ಮೊದಲ ಅಧಿಕೃತ ಭಾರತ ಭೇಟಿಯ ವೇಳೆ ಘೋಷಣೆಯಾಯಿತು.
➤ ಈ ಹಿಂದೆ ಭಾರತೀಯ ಪ್ರಯಾಣಿಕರು ಜರ್ಮನಿಯ ವಿಮಾನ ನಿಲ್ದಾಣಗಳಲ್ಲಿ ಸುರಕ್ಷಿತ ಅಂತರರಾಷ್ಟ್ರೀಯ ಸಂಪರ್ಕ ಹೊಂದಿದ್ದರೂ ಶೆಂಗನ್ ಟ್ರಾನ್ಸಿಟ್ ವೀಸಾ ಪಡೆಯಬೇಕಾಗಿತ್ತು. ಹೊಸ ನಿರ್ಧಾರದಿಂದ ಭಾರತೀಯ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗುವ ಜೊತೆಗೆ ಜನ-ಜನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ.
➤ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭಾರತ–ಜರ್ಮನಿ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರಕ್ಕೆ ಚಾನ್ಸೆಲರ್ ಮೆರ್ಜ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರೂಪಿಸಲಾದ ಸಮಗ್ರ ಮಾರ್ಗಸೂಚಿ ದ್ವಿಪಕ್ಷೀಯ ಶೈಕ್ಷಣಿಕ ಸಹಕಾರಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು. ಜರ್ಮನಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಲು ಮುಕ್ತ ಆಹ್ವಾನ ನೀಡಲಾಗಿದೆ.
➤ ಭಾರತ–ಜರ್ಮನಿ ನಡುವಿನ ದ್ವಿಪಕ್ಷೀಯ ವ್ಯಾಪಾರವು 50 ಬಿಲಿಯನ್ ಡಾಲರ್‌ಗಿಂತ ಹೆಚ್ಚು ದಾಟಿದ್ದು, ಜರ್ಮನಿಯ 2,000ಕ್ಕೂ ಅಧಿಕ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಉಭಯ ದೇಶಗಳು ಸಹಕರಿಸುತ್ತಿದ್ದು, ಈ ಸಹಕಾರವನ್ನು ವಿಸ್ತರಿಸಲು ಭಾರತ–ಜರ್ಮನಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಯೋಜನೆ ಘೋಷಿಸಲಾಯಿತು.
➤ ಚರ್ಚೆಗಳ ವೇಳೆ ಉಕ್ರೇನ್ ಮತ್ತು ಗಾಜಾ ಸಂಘರ್ಷ, ಭಯೋತ್ಪಾದನೆ ವಿರುದ್ಧದ ಹೋರಾಟ, ಜಾಗತಿಕ ಸಂಸ್ಥೆಗಳ ಸುಧಾರಣೆ, ಯುಎನ್ ಭದ್ರತಾ ಮಂಡಳಿ ಸುಧಾರಣೆಗೆ ಜಿ4 ಗುಂಪಿನ ಸಹಕಾರ, ಹಸಿರು ಇಂಧನ, ಹೈಡ್ರೋಜನ್ ಯೋಜನೆಗಳು, ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದ ಸಹಕಾರ ಕುರಿತು ಒಪ್ಪಂದಗಳಾಯಿತು. ಭಾರತ–ಜರ್ಮನಿ ರಾಜತಾಂತ್ರಿಕ ಸಂಬಂಧಗಳಿಗೆ 75 ವರ್ಷಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ 25 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಈ ಭೇಟಿ ನಡೆದಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.
ಮಂಗಳವಾರ, 13 ಜನವರಿ 2026
11:45 ಪೂರ್ವಾಹ್ನ
Daily PDF
ಜರ್ಮನಿ ಪ್ರಯಾಣ ಇನ್ನು ಸುಲಭ: ಭಾರತೀಯರಿಗೆ ಟ್ರಾನ್ಸಿಟ್ ವೀಸಾ ಮುಕ್ತ ಘೋಷಣೆ! ಮೋದಿ-ಮೆರ್ಜ್ ಭೇಟಿಯ ಪ್ರಮುಖ ನಿರ್ಧಾರಗಳು
Authored by:
Akshata Halli