ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಶನಿವಾರದಂದು ‘ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ’ (International Coastal Cleanup Day - ICCD) ವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಸಮುದ್ರ, ಕಡಲತೀರಗಳು, ನದಿಗಳು ಮತ್ತು ಸರೋವರಗಳನ್ನು ಪ್ಲಾಸ್ಟಿಕ್ ಹಾಗೂ ಇತರ ಅಪಾಯಕಾರಿ ತ್ಯಾಜ್ಯಗಳಿಂದ ಮುಕ್ತಗೊಳಿಸಿ ಜಲಚರ ವ್ಯವಸ್ಥೆಯನ್ನು ರಕ್ಷಿಸುವುದು ಈ ವಿಶೇಷ ದಿನದ ಮುಖ್ಯ ಉದ್ದೇಶವಾಗಿದೆ.
➤ ಅಮೆರಿಕದ 'ಓಷಿಯನ್ ಕನ್ಸರ್ವೆನ್ಸಿ' ಸಂಸ್ಥೆಯು 1986ರಲ್ಲಿ ಆರಂಭಿಸಿದ ಈ ಜಾಗತಿಕ ಅಭಿಯಾನವು UNEP ಮತ್ತು SACEP ಬೆಂಬಲದೊಂದಿಗೆ ವಿಶ್ವದಾದ್ಯಂತ ನಡೆಯುತ್ತಿದ್ದು, ಭಾರತದಲ್ಲಿ 2006ರಿಂದ ಭಾರತೀಯ ಕರಾವಳಿ ರಕ್ಷಕ ಪಡೆ (ICG), ಭೂ ವಿಜ್ಞಾನ ಸಚಿವಾಲಯ (MoES) ಹಾಗೂ ಪರಿಸರ ಸಚಿವಾಲಯಗಳ (MoEFCC) ಸಹಯೋಗದೊಂದಿಗೆ ಆಯೋಜಿತವಾಗುತ್ತಿದೆ.
ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಮುಖ್ಯ ಉದ್ದೇಶಗಳು:
- ಜಾಗೃತಿ ಮೂಡಿಸುವುದು: ಸಮುದ್ರ ಮತ್ತು ಕರಾವಳಿ ಮಾಲಿನ್ಯದ ಭೀಕರತೆ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳಿಗೆ ಉಂಟಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.   
- ತ್ಯಾಜ್ಯ ತೆರವುಗೊಳಿಸುವುದು: ಕಡಲತೀರಗಳು, ನದಿ ಮತ್ತು ಸರೋವರಗಳಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ತೆರವುಗೊಳಿಸುವುದು.   
- ಡೇಟಾ ಸಂಗ್ರಹಣೆ ಹಾಗೂ ಸಂಶೋಧನೆ: ಸಂಗ್ರಹವಾಗುವ ತ್ಯಾಜ್ಯದ ಪ್ರಕಾರ ಮತ್ತು ಪ್ರಮಾಣವನ್ನು ನಿಖರವಾಗಿ ದಾಖಲಿಸುವುದು. ಈ ಮಾಹಿತಿಯು ಮಾಲಿನ್ಯದ ಮೂಲಗಳನ್ನು ಗುರುತಿಸಲು ಹಾಗೂ ಭವಿಷ್ಯದಲ್ಲಿ ಸೂಕ್ತ ನೀತಿಗಳನ್ನು ರೂಪಿಸಲು ನೆರವಾಗುತ್ತದೆ.   
- ಸಮುದ್ರ ಜೀವಿಗಳ ರಕ್ಷಣೆ: ಪ್ಲಾಸ್ಟಿಕ್ ಸೇವನೆಯಿಂದ ಸಾವನ್ನಪ್ಪುತ್ತಿರುವ ಕಡಲಾಮೆಗಳು, ಮೀನುಗಳು ಮತ್ತು ಇತರ ಜಲಚರ ಪರಿಸರವನ್ನು ಸಂರಕ್ಷಿಸುವುದು.
- ಸಮುದಾಯದ ಭಾಗಿತ್ವ: ಯುವಜನರು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರನ್ನು ನೇರವಾಗಿ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸುವುದು.   
ಭಾರತದಲ್ಲಿ ಕೈಗೊಳ್ಳಲಾದ ಪ್ರಮುಖ ಮುನ್ನೆಡನೆಗಳು:
- ಸ್ವಚ್ಛ ಸಾಗರ, ಸುರಕ್ಷಿತ ಸಾಗರ (Swachh Sagar, Surakshit Sagar): ಕೇಂದ್ರ ಸರ್ಕಾರವು ಭಾರತದ ಸುದೀರ್ಘ ಕರಾವಳಿ ತೀರವನ್ನು ಸ್ವಚ್ಛವಾಗಿಡಲು ಕೈಗೊಂಡಿರುವ ಬೃಹತ್ ಅಭಿಯಾನ ಇದಾಗಿದೆ.
- ಪುನೀತ್ ಸಾಗರ್ ಅಭಿಯಾನ (Puneet Sagar Abhiyan): ಎನ್‌ಸಿಸಿ (NCC) ಕೆಡೆಟ್‌ಗಳು ಮತ್ತು ಯುವಜನರನ್ನು ಒಳಗೊಂಡಂತೆ ಜಲಮೂಲಗಳ ಪ್ಲಾಸ್ಟಿಕ್ ತೆರವುಗೊಳಿಸಲು ಆರಂಭಿಸಲಾದ ರಾಷ್ಟ್ರಮಟ್ಟದ ಕಾರ್ಯಕ್ರಮ.
- ಸಂಸ್ಥೆಗಳ ಭಾಗಿತ್ವ: ಭಾರತೀಯ ಕರಾವಳಿ ರಕ್ಷಕ ಪಡೆ (ICG), ಸ್ಥಳೀಯ ಆಡಳಿತ, ಶಾಲಾ-ಕಾಲೇಜುಗಳು, ಸ್ವಯಂಸೇವಾ ಸಂಸ್ಥೆಗಳು (NGOs) ಮತ್ತು ಕರಾವಳಿ ಪೊಲೀಸ್ ಪಡೆ ಒಟ್ಟಾಗಿ ಪ್ರತಿವರ್ಷ ಸಾವಿರಾರು ಕೆಜಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತವೆ.