➤ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ರಕ್ಷಣಾ ತಂತ್ರಜ್ಞಾನ ಮತ್ತು ರಾಜತಾಂತ್ರಿಕ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಇತ್ತೀಚೆಗೆ ನಡೆದ ಆಸಿಯಾನ್ (ASEAN) ರಕ್ಷಣಾ ಸಚಿವರ ಸಭೆ ಹಾಗೂ ಮುಂಬರುವ ಜಿ-20 ವಿದೇಶಾಂಗ ಸಚಿವರ ಸಭೆಗಳಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆ ಇದಕ್ಕೆ ಸಾಕ್ಷಿಯಾಗಿದೆ. 
➤ ಆಸಿಯಾನ್ ಸಭೆಯಲ್ಲಿ ರಾಜನಾಥ್ ಸಿಂಗ್: ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ಸಹಕಾರ: ಫಿಲಿಪ್ಪಿನ್ಸ್‌ನ ಸೆಬು ನಗರದಲ್ಲಿ ನಡೆದ ಆಸಿಯಾನ್ ರಕ್ಷಣಾ ಸಚಿವರ ಸಭೆ (ADMM-Plus) ಹಾಗೂ ಅದರ ಪಾಲುದಾರ ರಾಷ್ಟ್ರಗಳ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿ ಮಾತನಾಡಿದರು. 

  • ಅನುಭವ ಹಂಚಿಕೆಗೆ ಭಾರತ ಸಿದ್ಧ: ಭಯೋತ್ಪಾದನೆ ನಿಗ್ರಹದಲ್ಲಿ ಭಾರತ ಗಳಿಸಿರುವ ಪ್ರಾಯೋಗಿಕ ಅನುಭವ ಮತ್ತು ಯಶಸ್ವಿ ಕಾರ್ಯಾಚರಣೆಗಳ ತಂತ್ರಗಳನ್ನು ಆಸಿಯಾನ್ ರಾಷ್ಟ್ರಗಳು ಹಾಗೂ ಅದರ ಪಾಲುದಾರ ದೇಶಗಳೊಂದಿಗೆ ಹಂಚಿಕೊಳ್ಳಲು ಭಾರತ ಸಿದ್ಧವಿದೆ ಎಂದು ತಿಳಿಸಿದರು.
  • ಆಪರೇಷನ್ ಸಿಂದೂರ (Operation Sindoor): ಗಡಿದಾಟಿ ಬರುವ ಭಯೋತ್ಪಾದನೆಯ ವಿರುದ್ಧ ಭಾರತ ಅನುಸರಿಸುತ್ತಿರುವ ಶೂನ್ಯ ಸಹಿಷ್ಣುತೆ (Zero Tolerance) ನಿಲುವಿಗೆ 'ಆಪರೇಷನ್ ಸಿಂದೂರ' ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಉಲ್ಲೇಖಿಸಿದರು.
  • ಸಾಮೂಹಿಕ ಸಾಮರ್ಥ್ಯ ವೃದ್ಧಿ: ಜಂಟಿ ಸೇನಾ ಅಭ್ಯಾಸಗಳು, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಮತ್ತು ನಿಖರವಾದ ಗುಪ್ತಚರ ಮಾಹಿತಿ ಹಂಚಿಕೆಯ ಮೂಲಕ ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಹೋರಾಡಬಹುದು ಎಂದರು.
  • ಇಂಡೋ-ಪೆಸಿಫಿಕ್ ವಲಯದ ಭದ್ರತೆ: ಹಿಂದೂ ಮಹಾಸಾಗರ ಪ್ರದೇಶ ಹಾಗೂ ವಿಶಾಲ ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತವು ನೆಚ್ಚಿನ ಮತ್ತು ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ (Net Security Provider) ಕಾರ್ಯನಿರ್ವಹಿಸಲಿದೆ ಎಂದು ಪುನರುಚ್ಚರಿಸಿದರು.

➤ ಜಿ-20 ಮತ್ತು ಕ್ವಾಡ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್: ಭಾರತದ ಬಹುಪಕ್ಷೀಯ ರಾಜತಾಂತ್ರಿಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕ ಮತ್ತು ಕಾರಿಬಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸದ ವಿವರಗಳು:
- ಜಿ-20 ವಿದೇಶಾಂಗ ಸಚಿವರ ಸಭೆ: ಅಮೆರಿಕದ ಅಟ್ಲಾಂಟಾದಲ್ಲಿ ಅಕ್ಟೋಬರ್ 30 ಮತ್ತು 31ರಂದು ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್ ಭಾಗವಹಿಸಲಿದ್ದಾರೆ.
- ಕ್ವಾಡ್ (QUAD) ಸಭೆ: ಜಿ-20 ಸಭೆಯ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ ವಿದೇಶಾಂಗ ಸಚಿವರೊಂದಿಗೆ ಬಾಗವಹಿಸಿ, 'ಕ್ವಾಡ್' ಒಕ್ಕೂಟದ ಚೌಕಟ್ಟಿನಲ್ಲಿ ಪ್ರಾದೇಶಿಕ ಭದ್ರತೆ ಹಾಗೂ ಸಹಕಾರದ ಕುರಿತು ಚರ್ಚಿಸಲಿದ್ದಾರೆ.
- ಕಾಮನ್‌ವೆಲ್ತ್ ಶೃಂಗಸಭೆ (CHOGM): ಅಟ್ಲಾಂಟಾ ಪ್ರವಾಸದ ನಂತರ, ಜೈಶಂಕರ್ ಅವರು ಆಂಟಿಗುವಾ ಮತ್ತು ಬಾರ್ಬುಡಾಗೆ ತೆರಳಲಿದ್ದು, ನವೆಂಬರ್ 1ರಿಂದ 4ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.