➤ ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಆರೋಗ್ಯ ಸಮಸ್ಯೆಯಾದ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟಲು ಕೇಂದ್ರ ಸರ್ಕಾರವು ನಾಳೆಯಿಂದ (ಫೆಬ್ರವರಿ-28-2026) ದೇಶಾದ್ಯಂತ ಬೃಹತ್ ಎಚ್‌ಪಿವಿ (HPV) ಲಸಿಕೆ ಅಭಿಯಾನವನ್ನು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
➤ ದೇಶಾದ್ಯಂತ ಮುಂದಿನ ಮೂರು ತಿಂಗಳ ಕಾಲ ನಡೆಯಲಿರುವ ಈ ಬೃಹತ್ ಅಭಿಯಾನದಡಿ, 14 ವರ್ಷದೊಳಗಿನ ಹಾಗೂ ಅಭಿಯಾನ ಆರಂಭಕ್ಕೆ 90 ದಿನಗಳ ಮೊದಲು 15ನೇ ವರ್ಷಕ್ಕೆ ಕಾಲಿಡುವ ಎಲ್ಲಾ ಅರ್ಹ ಹೆಣ್ಣುಮಕ್ಕಳನ್ನು ಗರ್ಭಕಂಠ ಕ್ಯಾನ್ಸರ್‌ನಿಂದ ರಕ್ಷಿಸುವ ಗುರಿಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಚ್‌ಪಿವಿ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
➤ ಲಸಿಕೆ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು: ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
- ಪೋಷಕರ ಒಪ್ಪಿಗೆ ಕಡ್ಡಾಯ: ಇದು ಸ್ವಯಂಪ್ರೇರಿತ ಅಭಿಯಾನವಾಗಿದ್ದು, ಪೋಷಕರ ಅನುಮತಿ ಇಲ್ಲದೆ ಲಸಿಕೆ ನೀಡುವಂತಿಲ್ಲ.
- ಖಾಲಿ ಹೊಟ್ಟೆಯಲ್ಲಿ ಪಡೆಯುವಂತಿಲ್ಲ: ಲಸಿಕೆ ಪಡೆಯುವ ಮಕ್ಕಳು ಕಡ್ಡಾಯವಾಗಿ ಆಹಾರ ಸೇವಿಸಿರಬೇಕು.
- ವಿಶ್ರಾಂತಿ: ಲಸಿಕೆ ಪಡೆದ ನಂತರ ಕನಿಷ್ಠ 30 ನಿಮಿಷಗಳ ಕಾಲ ಆರೋಗ್ಯ ಕೇಂದ್ರದಲ್ಲೇ ವಿಶ್ರಾಂತಿ ಪಡೆಯುವುದು ಅವಶ್ಯಕ.
➤ ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್: ಭಾರತದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಅಂಕಿ-ಅಂಶಗಳ ಪ್ರಕಾರ: ಪ್ರತಿ ವರ್ಷ ಭಾರತದಲ್ಲಿ ಸುಮಾರು 80,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ವಾರ್ಷಿಕವಾಗಿ ಸುಮಾರು 42,000 ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಶೇ. 80 ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಹೂಮನ್ ಪ್ಯಾಪಿಲ್ಲೊಮ ವೈರಸ್ (HPV-16 ಮತ್ತು 18) ಕಾರಣವಾಗಿದೆ.
- HPV: ಇದು ಲೈಂಗಿಕವಾಗಿ ಹರಡುವ ಸೋಂಕು ಆಗಿದ್ದು, ದೀರ್ಘಕಾಲದವರೆಗೆ ದೇಹದಲ್ಲಿದ್ದರೆ ಕ್ಯಾನ್ಸರ್ ಆಗಿ ಪರಿಣಮಿಸಬಹುದು.
- ಕ್ವಾಡ್ ಕ್ಯಾನ್ಸರ್ ಮೂನ್‌ಶಾಟ್ (Quad Cancer Moonshot): ಸೆಪ್ಟೆಂಬರ್ 2024 ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕ್ಯಾನ್ಸರ್ ತಡೆಗೆ ಕೈಗೆಟುಕುವ ದರದ ಚಿಕಿತ್ಸೆ ಮತ್ತು ಲಸಿಕೆಯ ಬಗ್ಗೆ ಒತ್ತು ನೀಡಿದ್ದರು.
- ಲಸಿಕೆಯ ಹೆಸರು: ಪ್ರಸ್ತುತ ಭಾರತದಲ್ಲಿ 'ಸೆರ್ವಾವಾಕ್' (Cervavac) ಎಂಬ ಸ್ವದೇಶಿ ನಿರ್ಮಿತ ಲಸಿಕೆ ಕೂಡ ಲಭ್ಯವಿದೆ.
ಶುಕ್ರವಾರ, 27 ಫೆಬ್ರುವರಿ 2026
3:53 ಅಪರಾಹ್ನ
Daily PDF
ಗರ್ಭಕಂಠ ಕ್ಯಾನ್ಸರ್ ತಡೆಗೆ ಕೇಂದ್ರದ ಬಿಗ್ ಸ್ಟೆಪ್: 1.2 ಕೋಟಿ ಹೆಣ್ಣುಮಕ್ಕಳಿಗೆ ಸಿಗಲಿದೆ ಉಚಿತ ಲಸಿಕೆ
Authored by:
Akshata Halli