➤ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಂಟಿಮೈಕ್ರೊಬಿಯಲ್ (Antimicrobials) ಔಷಧಗಳನ್ನು ಕೇಂದ್ರ ನಿಯಂತ್ರಣದ ವ್ಯಾಪ್ತಿಗೆ ತರಲು ಹೊಸ ಔಷಧಗಳು ಮತ್ತು ವೈದ್ಯಕೀಯ ಪ್ರಯೋಗಗಳ ನಿಯಮಗಳು, 2019 (New Drugs and Clinical Trials Rules, 2019) ಕ್ಕೆ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸಿದೆ. ನವೆಂಬರ್ 6, 2026 ರ ಕರಡು ಗೆಜೆಟ್ ಅಧಿಸೂಚನೆ (G.S.R. 983 (E)) ಮೂಲಕ ಈ ಬದಲಾವಣೆಯನ್ನು ಪ್ರಕಟಿಸಲಾಗಿದೆ.
➤ ದೇಶದಲ್ಲಿ ಹೆಚ್ಚುತ್ತಿರುವ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು (AMR — Antimicrobial Resistance) ತಡೆಗಟ್ಟುವುದು ಮತ್ತು ಔಷಧಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಖಚಿತಪಡಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
➤ ಪ್ರಸ್ತಾವಿತ ತಿದ್ದುಪಡಿಯ ಪ್ರಮುಖ ಅಂಶಗಳು
- ನಿಯಮ 2(1)(w)(v) ಅಡಿ ಸೇರ್ಪಡೆ: 2019 ರ ನಿಯಮಗಳ 'ಹೊಸ ಔಷಧ' (New Drug) ವ್ಯಾಖ್ಯಾನದ ಅಡಿಯಲ್ಲಿ ಆಂಟಿಮೈಕ್ರೊಬಿಯಲ್ ಔಷಧಗಳನ್ನು ಸೇರಿಸಲು ಉದ್ದೇಶಿಸಲಾಗಿದೆ.
- ಕೇಂದ್ರದ ಪೂರ್ವಾನುಮತಿ ಕಡ್ಡಾಯ: ಔಷಧ ತಯಾರಕರು ರಾಜ್ಯ ಪರವಾನಗಿ ಪ್ರಾಧಿಕಾರದಿಂದ (SLA) ತಯಾರಿಕಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಕೇಂದ್ರ ಪರವಾನಗಿ ಪ್ರಾಧಿಕಾರದಿಂದ (CLA) ಪೂರ್ವಾನುಮತಿ ಪಡೆಯಬೇಕಾಗುತ್ತದೆ.
- ವೈಜ್ಞಾನಿಕ ಪರೀಕ್ಷೆಗಳಿಗೆ ಒತ್ತು: ಜೈವಿಕ ಲಭ್ಯತೆ / ಜೈವಿಕ ಸಮಾನತೆ (Bioavailability / Bioequivalence) ಮತ್ತು ಸ್ಥಿರತೆ (Stability) ಅಧ್ಯಯನಗಳಂತಹ ಕಟ್ಟುನಿಟ್ಟಾದ ಪರಿಶೀಲನೆಗಳಿಲ್ಲದೆ ಪರವಾನಗಿ ನೀಡುವುದರಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
- ಸಾರ್ವಜನಿಕ ಸಲಹೆ ಮತ್ತು ಆಕ್ಷೇಪಣೆಗಳು: ಕರಡು ನಿಯಮಗಳನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರು ಮತ್ತು ಸಂಬಂಧಪಟ್ಟ ಪಾಲುದಾರರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಗೆಜೆಟ್ ಪ್ರತಿ ಸಾರ್ವಜನಿಕರಿಗೆ ಲಭ್ಯವಾದ ದಿನದಿಂದ 30 ದಿನಗಳ ಒಳಗೆ ಆರೋಗ್ಯ ಸಚಿವಾಲಯಕ್ಕೆ (ಭೌತಿಕವಾಗಿ ಅಥವಾ [email protected] ಇಮೇಲ್ ಮೂಲಕ) ಸಲ್ಲಿಸಬಹುದು.
➤ ಆಂಟಿಮೈಕ್ರೊಬಿಯಲ್ ಪ್ರತಿರೋಧ (AMR)  ಗಂಭೀರ ಸವಾಲು: ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮತ್ತು ಪರಾವಲಂಬಿಗಳು ಕಾಲಾನಂತರದಲ್ಲಿ ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಂಡಾಗ ಆಂಟಿಮೈಕ್ರೊಬಿಯಲ್ ಪ್ರತಿರೋಧ ಉಂಟಾಗುತ್ತದೆ.
- ಕಳಪೆ ಗುಣಮಟ್ಟದ ಅಥವಾ ನಿರೀಕ್ಷಿತ ಪರಿಣಾಮ ನೀಡದ ಆಂಟಿಮೈಕ್ರೊಬಿಯಲ್ ಔಷಧಗಳು ಸೋಂಕನ್ನು ಸರಿಯಾಗಿ ಗುಣಪಡಿಸದೆ, ಪ್ರತಿರೋಧ ಶಕ್ತಿ ಬೆಳೆಯಲು ಕಾರಣವಾಗುತ್ತವೆ.
- ಇದರಿಂದ ಸಾಮಾನ್ಯ ಸೋಂಕುಗಳ ಚಿಕಿತ್ಸೆಯೂ ಕಷ್ಟಕರವಾಗಿ, ಗಂಭೀರ ಅನಾರೋಗ್ಯ ಮತ್ತು ಸಾವಿನ ಅಪಾಯ ಹೆಚ್ಚುತ್ತದೆ.
- ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಜಾಗತಿಕ ಸಾರ್ವಜನಿಕ ಆರೋಗ್ಯದ ಪ್ರಮುಖ ಅಪಾಯಗಳಲ್ಲಿ ಒಂದೆಂದು ಗುರುತಿಸಿದೆ.
- G20 ನವದೆಹಲಿ ನಾಯಕರ ಘೋಷಣೆಯೂ 'ಒಂದು ಆರೋಗ್ಯ' (One Health) ವಿಧಾನದ ಮೂಲಕ AMR ವಿರುದ್ಧ ಸಮನ್ವಯದ ಕ್ರಮದ ಅಗತ್ಯವನ್ನು ಒತ್ತಿಹೇಳಿದೆ.