➤ ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ನಡೆ ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC - United Nations Security Council) 2028-29ರ ಅವಧಿಗೆ ತಾತ್ಕಾಲಿಕ (ಕಾಯಂ ಅಲ್ಲದ) ಸದಸ್ಯತ್ವಕ್ಕಾಗಿ ಭಾರತ ಅಧಿಕೃತವಾಗಿ ತನ್ನ ಪ್ರಚಾರ ಅಭಿಯಾನವನ್ನು ಜಾಗತಿಕ ಮಟ್ಟದಲ್ಲಿ ಆರಂಭಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಭಾರತದ ಈ ಬಾರಿಯ ಕಾರ್ಯಸೂಚಿ ಜಾಗತಿಕ ಗಮನ ಸೆಳೆಯುತ್ತಿದೆ.
➤ ಭಾರತದ ಸ್ಪರ್ಧೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಏಷ್ಯಾ-ಪೆಸಿಫಿಕ್ ಗುಂಪಿನ ಏಕೈಕ ಸ್ಥಾನಕ್ಕಾಗಿ ಈ ಚುನಾವಣೆ ನಡೆಯಲಿದ್ದು, ಭಾರತದ ಎದುರಾಳಿಯಾಗಿ ತಾಜಿಕಿಸ್ತಾನ್ ಕಣದಲ್ಲಿದೆ. ಈ ಚುನಾವಣೆ ಮುಂದಿನ ವರ್ಷ (ಜೂನ್ ತಿಂಗಳಲ್ಲಿ) ನಡೆಯಲಿದೆ. ಭಾರತ ಈ ಚುನಾವಣೆಯಲ್ಲಿ ಜಯಗಳಿಸಿದರೆ, ಇದು ಭಾರತಕ್ಕೆ 9ನೇ ಅವಧಿಯ ಸದಸ್ಯತ್ವವಾಗಲಿದೆ.
➤ ಭಾರತ ಮುಂದಿಟ್ಟಿರುವ ‘SHANTI’ ಯೋಜನೆ: ಭಾರತವು ಈ ಬಾರಿಯ ಅಭಿಯಾನಕ್ಕಾಗಿ ಜಾಗತಿಕ ವೇದಿಕೆಯಲ್ಲಿ ‘SHANTI’ (ಶಾಂತಿ) ಎಂಬ ಅತ್ಯಂತ ಪ್ರಭಾವಶಾಲಿ ಯೋಜನೆಯನ್ನು ಪ್ರಸ್ತಾಪಿಸಿದೆ. SHANTI ಪೂರ್ಣ ರೂಪ: Securing Holistic Advancement through Norms, Trust, and Integrity (ನಿಯಮಗಳು, ನಂಬಿಕೆ ಮತ್ತು ಸಮಗ್ರತೆಯ ಮೂಲಕ ಸಮಗ್ರ ಪ್ರಗತಿಯನ್ನು ಖಾತರಿಪಡಿಸುವುದು).
➤ ಭಾರತದ ಪ್ರಮುಖ ಆದ್ಯತೆಗಳು: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕಾರ, ಭಾರತವು ಈ ಕೆಳಗಿನ ಜಾಗತಿಕ ಸವಾಲುಗಳ ನಿವಾರಣೆಗೆ ಒತ್ತು ನೀಡಲಿದೆ:
  • ಭಯೋತ್ಪಾದನೆ ತಡೆ: ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದನ್ನು ತಡೆಯುವುದು.
  • ನಾವಿಕರ ಭದ್ರತೆ: ಮುಕ್ತ ಸಮುದ್ರಯಾನ ಸ್ವಾತಂತ್ರ್ಯ ಮತ್ತು ಕಡಲಗಳ್ಳರ ಹಾವಳಿ ತಡೆಗೆ ಅಂತರರಾಷ್ಟ್ರೀಯ ಸಮುದ್ರ ಕಾನೂನುಗಳ ಕಟ್ಟುನಿಟ್ಟಿನ ಜಾರಿ.
  • ಗ್ಲೋಬಲ್ ಸೌತ್ ಧ್ವನಿ: ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿ ಕಾಯುವುದು ಹಾಗೂ ತಂತ್ರಜ್ಞಾನ/AI ದುರ್ಬಳಕೆ ತಡೆಯುವುದು.
➤ ಪ್ಯಾಲೆಸ್ತೀನ್ ಕುರಿತು ಭಾರತದ ನಿಲುವು: ಬ್ರಸೆಲ್ಸ್‌ನಲ್ಲಿ ನಡೆದ ಸಭೆಯಲ್ಲಿ ಭಾರತವು ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ಸಿಗಬೇಕು ಎಂಬ ಬೇಡಿಕೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
➤ ಶಾಂತಿಪಾಲನಾ ಪಡೆಯಲ್ಲಿ ಭಾರತದ ಸಾಧನೆ:
  • ವಿಶ್ವಸಂಸ್ಥೆ ಸ್ಥಾಪನೆಯಾದಾಗಿನಿಂದ ಭಾರತವು 50ಕ್ಕೂ ಹೆಚ್ಚು ಶಾಂತಿಪಾಲನಾ ಮಿಷನ್‌ಗಳಲ್ಲಿ ಸುಮಾರು 3,0,000 ಸಿಬ್ಬಂದಿಗಳನ್ನು ನಿಯೋಜಿಸಿದೆ.
  • ಪ್ರಸ್ತುತ ಜಗತ್ತಿನಾದ್ಯಂತ ಸಕ್ರಿಯವಾಗಿರುವ 11 ಮಿಷನ್‌ಗಳ ಪೈಕಿ 10ರಲ್ಲಿ 4,300ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ