➤ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಮತ್ತೊಂದು ಗರಿ ಲಭಿಸಿದೆ. ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಭಾರತದ 5 ಹೊಸ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳನ್ನು ತನ್ನ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ (Tentative List) ಸೇರ್ಪಡೆಗೊಳಿಸಿದೆ. ಈ ಹೊಸ ಸೇರ್ಪಡೆಯೊಂದಿಗೆ ಭಾರತದಿಂದ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿರುವ ತಾಣಗಳ ಒಟ್ಟು ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
➤ ಹೊಸದಾಗಿ ಸೇರ್ಪಡೆಯಾದ 5 ಪಾರಂಪರಿಕ ತಾಣಗಳು: ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರಿದ 5 ತಾಣಗಳಲ್ಲಿ 4 ತಾಣಗಳು ಮಧ್ಯಪ್ರದೇಶ ರಾಜ್ಯಕ್ಕೆ ಸೇರಿದ್ದರೆ, 1 ತಾಣವು ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ ಜಂಟಿ ಪ್ರಸ್ತಾವನೆಯಾಗಿದೆ.
1. ಉದಯಗಿರಿ ಗುಹೆಗಳು (Udaigiri Caves) – ಮಧ್ಯಪ್ರದೇಶ
- ಕಾಲಘಟ್ಟ: ಕ್ರಿ.ಶ. 4ರಿಂದ 5ನೇ ಶತಮಾನದ ಗುಪ್ತರ ಕಾಲ.
- ವಿಶೇಷತೆ: ಮಧ್ಯಪ್ರದೇಶದ ವಿದಿಶಾ ಬಳಿ ಇರುವ ಈ ಉದಯಗಿರಿ ಬೆಟ್ಟದಲ್ಲಿ 20 ಬಂಡೆಗಳನ್ನು ಕೊರೆದು ನಿರ್ಮಿಸಿದ (Rock-cut) ಗುಹೆಗಳಿವೆ. ಇಲ್ಲಿ ಪ್ರಸಿದ್ಧ ವಿಷ್ಣುವಿನ 'ವರಾಹ ಅವತಾರ'ದ ಬೃಹತ್ ಕೆತ್ತನೆ ಹಾಗೂ ಗುಪ್ತರ ಕಾಲದ ಶಾಸನಗಳನ್ನು ಕಾಣಬಹುದು.
2. ಬಾಗ್ ಗುಹಾ ವರ್ಣಚಿತ್ರಗಳು (Bagh Cave Paintings) – ಮಧ್ಯಪ್ರದೇಶ
- ವಿಶೇಷತೆ: ಮಧ್ಯಪ್ರದೇಶದ ಧಾರಾ ಜಿಲ್ಲೆಯ ಬಾಗ್ನಿ ನದಿ ದಂಡೆಯ ಮೇಲಿರುವ 9 ಬೌದ್ಧ ಧರ್ಮದ ಬಂಡೆ ಕೊರೆದ ಗುಹೆಗಳು.
- ಪ್ರಾಮುಖ್ಯತೆ: ವಿಂಧ್ಯ ಪರ್ವತ ಶ್ರೇಣಿಯ ಕೆಂಪು ಮರಳುಗಲ್ಲಿನಲ್ಲಿ ನಿರ್ಮಿತವಾಗಿರುವ ಈ ಗುಹೆಗಳು ತಮ್ಮ ಅದ್ಭುತ ಭಿತ್ತಿಚಿತ್ರಗಳಿಗೆ (Mural Paintings) ವಿಶ್ವಪ್ರಸಿದ್ಧವಾಗಿವೆ.
3. ಚಂಬಲ್ ಕಣಿವೆಯ ದೇವಾಲಯಗಳ ಸಮೂಹ (Group of Temples of the Chambal Valley) – ಮಧ್ಯಪ್ರದೇಶ
- ಪ್ರಮುಖ ತಾಣಗಳು: ಬಟೇಶ್ವರ (Bateshwar), ಪಡಾವಳಿ (Padavali) ಮತ್ತು ಕಾಕರ್ಮಠ (Kakarmath).
- ಪ್ರಾಮುಖ್ಯತೆ: ಚಂಬಲ್ ನದಿ ಕಣಿವೆಯಲ್ಲಿರುವ ಈ ದೇವಾಲಯ ಶೈಲಿಗಳು ಭಾರತೀಯ ವಾಸ್ತುಶಿಲ್ಪದ ವೈಭವವನ್ನು ಸಾರುತ್ತವೆ.
4. ಗಿನ್ನೋರ್‌ಗಢ್ ಕೋಟೆ (Ginnorgarh Fort) – ಮಧ್ಯಪ್ರದೇಶ
- ಪ್ರಾಮುಖ್ಯತೆ: ಮಧ್ಯಪ್ರದೇಶದ ರಾಯ್‌ಸೇನ್ ಜಿಲ್ಲೆಯಲ್ಲಿರುವ ಈ ಕೋಟೆಯು ರಾಜ ಗೊಂಡ್ (Raj Gond) ರಾಜವಂಶದ ಪ್ರಮುಖ ರಕ್ಷಣಾತ್ಮಕ ರಾಜಧಾನಿಯಾಗಿತ್ತು. ಇದು ಮಧ್ಯ ಭಾರತದ ಬುಡಕಟ್ಟು ಪರಂಪರೆಯನ್ನು ಪ್ರತಿನಿಧಿಸುತ್ತದೆ.
5. 'ಸತ್ಯಾಗ್ರಹ ತಾಣಗಳು' – ಭಾರತ ಮತ್ತು ದಕ್ಷಿಣ ಆಫ್ರಿಕಾ (Sites of Satyagraha)
- ವಿಶೇಷತೆ: ಇದು ಎರಡು ದೇಶಗಳನ್ನು ಒಳಗೊಂಡ ಜಂಟಿ ಪ್ರಸ್ತಾವನೆ (Transnational Proposal) ಆಗಿದೆ.
- ಸಂಖ್ಯೆ: ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹದ ವಿಕಾಸವನ್ನು ಬಿಂಬಿಸುವ ಒಟ್ಟು 9 ತಾಣಗಳನ್ನು ಒಳಗೊಂಡಿದೆ.
- ದಕ್ಷಿಣ ಆಫ್ರಿಕಾದ 2 ತಾಣಗಳು: ಪೀಟರ್‌ಮಾರಿಟ್ಜ್‌ಬರ್ಗ್ ರೈಲ್ವೆ ನಿಲ್ದಾಣ (Pietermaritzburg) ಮತ್ತು ಫೀನಿಕ್ಸ್ ಸೆಟಲ್‌ಮೆಂಟ್ (Phoenix Settlement).
- ಭಾರತದ 7 ತಾಣಗಳು: ಸಬರಮತಿ ಆಶ್ರಮ, ಸೇವಾಗ್ರಾಮ ಆಶ್ರಮ, ಮಣಿ ಭವನ್, ಅಾಗಾ ಖಾನ್ ಅರಮನೆ, ಗಾಂಧಿ ಸ್ಮೃತಿ, ಹರಿಜನ ಸೇವಕ ಸಂಘ ಮತ್ತು ಮಹಾತ್ಮಾ ಗಾಂಧಿ ಸತ್ಯಾಗ್ರಹ ಸ್ಮಾರಕ.