➤ ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿರುವ ಗ್ಲೌ ಸರೋವರವನ್ನು (Glaw Lake) ಭಾರತದ 101ನೇ ರಾಮ್‌ಸರ್ ತಾಣ (Ramsar Site) ಎಂದು ಅಧಿಕೃತವಾಗಿ ಗುರುತಿಸಲಾಗಿದೆ. ಇದು ಅರುಣಾಚಲ ಪ್ರದೇಶ ರಾಜ್ಯದ ಮೊಟ್ಟಮೊದಲ ರಾಮ್‌ಸರ್ ಜೌಗು ಪ್ರದೇಶ (Ramsar Wetland) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
➤ ಗ್ಲೌ ಸರೋವರದ ಪ್ರಾಮುಖ್ಯತೆ ಮತ್ತು ಜೀವವೈವಿಧ್ಯ:
  • ಭೌಗೋಳಿಕ ಹಿನ್ನೆಲೆ: ಗ್ಲೌ ಸರೋವರವು ಪೂರ್ವ ಹಿಮಾಲಯದ ಎತ್ತರದ ಪ್ರದೇಶದಲ್ಲಿರುವ ಶುದ್ಧ ನೀರಿನ ಸರೋವರವಾಗಿದ್ದು (Freshwater High-altitude Lake), ಹಿಮಪಾತ ಮತ್ತು ಜೀವಂತ ಪರ್ವತ ತೊರೆಗಳಿಂದ ನೀರು ಪಡೆಯುತ್ತದೆ.
  • ಸಂರಕ್ಷಿತ ವಲಯ: ಇದು ಲೋಹಿತ್ ಜಿಲ್ಲೆಯ ಕಮ್ಲಾಂಗ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯದ (Kamlang Tiger Reserve & Wildlife Sanctuary) ಒಳಭಾಗದಲ್ಲಿದೆ.
  • ಸಮೃದ್ಧ ಜೀವವೈವಿಧ್ಯ: ಈ ಸರೋವರದ ಜಲಾನಯನ ಪ್ರದೇಶದಲ್ಲಿ 150ಕ್ಕೂ ಹೆಚ್ಚು ವೃಕ್ಷ ಪ್ರಭೇದಗಳು ಹಾಗೂ 49ಕ್ಕೂ ಹೆಚ್ಚು ಆರ್ಕಿಡ್ (Orchid) ಪ್ರಭೇದಗಳು ಕಂಡುಬರುತ್ತವೆ.
  • ಸೂಚಕ ಪ್ರಭೇದಗಳು: ಹಿಮಾಲಯನ್ ಪರಿಸರ ವ್ಯವಸ್ಥೆಯಲ್ಲಿ ಆರ್ಕಿಡ್‌ಗಳು ಪರಿಸರದ ಗುಣಮಟ್ಟವನ್ನು ಅಳೆಯುವ ಸೂಚಕ ಪ್ರಭೇದಗಳಾಗಿ (Indicator Species) ಕಾರ್ಯನಿರ್ವಹಿಸುತ್ತವೆ.
➤ ರಾಮ್‌ಸರ್ ಒಪ್ಪಂದವು ಅಂತರರಾಷ್ಟ್ರೀಯ ಮಹತ್ವದ ಜೌಗು ಪ್ರದೇಶಗಳು (Wetlands) ಮತ್ತು ಅವುಗಳ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಸುಸ್ಥಿರವಾಗಿ ಬಳಸಲು 1971 ರಲ್ಲಿ ಇರಾನ್‌ನ ರಾಮ್‌ಸರ್ ನಗರದಲ್ಲಿ ರೂಪಿಸಲಾದ ಒಂದು ಜಾಗತಿಕ ಒಪ್ಪಂದವಾಗಿದೆ.
➤ ಭಾರತದಲ್ಲಿ ರಾಮ್‌ಸರ್ ತಾಣಗಳ ಪ್ರಸ್ತುತ ಸ್ಥಿತಿ:
  • ಒಟ್ಟು ಸಂಖ್ಯೆ: ಗ್ಲೌ ಸರೋವರದ ಸೇರ್ಪಡೆಯೊಂದಿಗೆ ಭಾರತದಲ್ಲಿ ಒಟ್ಟು ರಾಮ್‌ಸರ್ ತಾಣಗಳ ಸಂಖ್ಯೆ 101 ಕ್ಕೆ ಏರಿಕೆಯಾಗಿದೆ.
  • ಹೆಚ್ಚು ರಾಮ್‌ಸರ್ ತಾಣ ಹೊಂದಿರುವ ರಾಜ್ಯಗಳು: ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಭಾರತದಲ್ಲಿ ಅತಿ ಹೆಚ್ಚು ರಾಮ್‌ಸರ್ ಜೌಗು ಪ್ರದೇಶಗಳನ್ನು ಹೊಂದಿವೆ.