* ದೇಶದಲ್ಲಿ ಬಡವರ ಪ್ರಮಾಣ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ಪ್ರಸಿದ್ಧ ಖಾಸಗಿ ಸಂಶೋಧನಾ ಸಂಸ್ಥೆ ಎನ್‌ಸಿಎಇಆರ್ (ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ) ನ ಮಾನವ ಅಭಿವೃದ್ಧಿ ಸಮೀಕ್ಷೆಯ ವರದಿ ಹೇಳಿದೆ. ಈ ವರದಿ ಎನ್‌ಸಿಎಇಆರ್ ಥಿಂಕ್‌ಟ್ಯಾಂಕ್‌ನ ಸೊನಾಲ್ಡೆ ದೇಸಾಯಿ ಸಿದ್ಧಪಡಿಸಿದ ವರದಿಯಾಗಿದೆ.
* 2011-12ನೇ ಸಾಲಿನಲ್ಲಿ ದೇಶದಲ್ಲಿ ಬಡವರ ಸಂಖ್ಯೆ ಶೇ.21ರಷ್ಟಿತ್ತು. ಅದು ಈಗ ಶೇ.8.5ಕ್ಕೆ ಇಳಿಕೆಯಾಗಿದೆ. ತೀವ್ರ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ‘ಸ್ವಲ್ಪ ಹೆಚ್ಚುಕಮ್ಮಿ ಆದರೆ’ ಮತ್ತೆ ಬಡತನಕ್ಕೆ ಜಾರುವವರ ಸಂಖ್ಯೆ ಈಗಲೂ ಗಣನೀಯವಾಗಿಯೇ ಇದೆ ಎಂದು ವರದಿ ತಿಳಿಸಿದೆ.
* ಎನ್‌ಸಿಎಇಆರ್ ಎಂಬುದು ದೇಶದ ಅತ್ಯಂತ ಹಳೆಯ ಆರ್ಥಿಕ ಹಾಗೂ ಸಾಮಾಜಿಕ ಸಂಶೋಧನೆಗಳಿಗೆ ಸಂಬಂಧಿಸಿದ ಎನ್‌ಜಿಒ ಆಗಿದೆ. ಇನ್ಫೋಸಿಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಇದರ ಅಧ್ಯಕ್ಷರಾಗಿದ್ದು, ಈ ಸಂಸ್ಥೆಯ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿದ ವರದಿಯಲ್ಲಿ ಭಾರತದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
* ಈ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 2011ರಲ್ಲಿ ಇದ್ದ ಬಡವರ ಸಂಖ್ಯೆ ಶೇ.24.8ರಿಂದ ಈಗ ಶೇ.8.6ಕ್ಕೆ ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಇದ್ದ ಬಡವರ ಸಂಖ್ಯೆ ಶೇ.13.4ರಿಂದ ಶೇ.8.4ಕ್ಕೆ ಇಳಿಕೆಯಾಗಿದೆ. ಒಟ್ಟಾರೆ 2011ರಲ್ಲಿ ಶೇ.21ರಷ್ಟಿದ್ದ ಬಡವರ ಸಂಖ್ಯೆ ಈಗ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
* ಎನ್‌ಸಿಎಇಆರ್ ವರದಿಯಲ್ಲಿ, ದೇಶದಲ್ಲಿ ಆಹಾರ ಸಬ್ಸಿಡಿ ಹಾಗೂ ಇನ್ನಿತರ ಸರ್ಕಾರಿ ನೆರವುಗಳನ್ನು ನೀಡುತ್ತಿರುವುದರಿಂದ ಬಡತನದ ಪ್ರಮಾಣ ಕಡಿಮೆಯಾಗಿದೆ. ಆದರೆ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತಿನಂತಹ ಘಟನೆಗಳು ಸಂಭವಿಸಿದರೆ ಮತ್ತೆ ಬಡತನಕ್ಕೆ ಜಾರುವ ಸಾಧ್ಯತೆಯಿರುವವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಸರ್ಕಾರಗಳು ಸಾಮಾಜಿಕ ಭದ್ರತೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.
ಶನಿವಾರ, 06 ಜುಲೈ 2024
11:02 ಪೂರ್ವಾಹ್ನ
Daily PDF
ಎನ್‌ಸಿಎಇಆರ್ ವರದಿ : ದೇಶದಲ್ಲಿ ಬಡವರ ಸಂಖ್ಯೆ 21%ರಿಂದ 8.5%ಕ್ಕೆ ಇಳಿಕೆ
Authored by:
Yallamma G