ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಪ್ರವಾಸೋದ್ಯಮ ನೀತಿ!
Published by Basavaraj Halli
24 ಜೂನ್ 2020
ಚಿಕ್ಕಮಗಳೂರು : ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ 2020-25 ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಅಂತಿಮಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಹಾಗು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ಚಿಂತಿಸಲಾಗಿದೆ.
ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯು ಸರಾಸರಿ ವಾರ್ಷಿಕ 85 ಲಕ್ಷ ಪ್ರವಾಸಿಗರನ್ನು ಹೊಂದಿದೆ. ಈ ಪ್ರಮಾಣದಲ್ಲಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ರೆಸಾರ್ಟ್ ಮತ್ತು ರಸ್ತೆ ನಿರ್ಮಾಣ, ಸೂಕ್ಷ್ಮ ಪ್ರದೇಶಗಳ ನೀರಿನ ಅತಿಯಾದ ಬಳಕೆಯಿಂದಾಗಿ ಜಿಲ್ಲೆಯ ಪರಿಸರ ಹಾಳಾಗುತ್ತಿದೆ. ಇದೆ ಕಾರಣದಿಂದ ಜಿಲ್ಲೆಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಬಗ್ಗೆ ಸ್ಥಳೀಯರು, ಪರಿಸರವಾದಿಗಳ ಬೇಡಿಕೆಯಾಗಿತ್ತು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವ ಸಿಟಿ ರವಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿದ್ದಾರೆ. ಪ್ರತ್ಯೇಕ ಪ್ರವಾಸ ನೀತಿಯ ಬಗ್ಗೆ ಚರ್ಚಿಸಲು ಇನ್ನೂ ಹಲವು ಸಭೆಗಳನ್ನು ಸವೆಸುವ ಸಾಧ್ಯತೆ ಇದೆ.