ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಪ್ರತ್ಯೇಕ ಬೋಡೋ ಲ್ಯಾಂಡ್ ಹೋರಾಟ ನಡೆಸುತ್ತಿದ್ದ ಅಸ್ಸಾಂನ ಬೋಡೋ ಜನರ ಬೇಡಿಕೆ ಕೊನೆಗೂ ತಾರ್ಕಿಕ ಅಂತ್ಯಕಂಡಿದ್ದು, ಸೋಮವಾರ ಬೋಡೋ ವಿವಾದ ಪರಿಹರಿಸುವ ನಿಟ್ಟಿನಲ್ಲಿ ನಿಷೇಧಿತ ಬಂಡುಕೋರ ಸಂಘಟನೆ ಎನ್ ಡಿಎಫ್ ಬಿ, ಎಬಿಎಸ್ ಯು ಸಂಘಟನೆ ಜತೆಗಿನ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ. ಬೋಡೋ ಲ್ಯಾಂಡ್ ಬೇಡಿಕೆಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಬೋಡೋ ಲ್ಯಾಂಡ್ ಇನ್ಮುಂದೆ ಬೋಡೋಲ್ಯಾಂಡ್ ಟೆರ್ರಿಟೋರಿಯಲ್ ರೀಜನ್ (ಬಿಟಿಆರ್) ಎಂದು ಕರೆಯಲ್ಪಡಲಿದೆ. ಅಲ್ಲದೇ ಆಡಳಿತಾತ್ಮಕವಾಗಿ ಹೆಚ್ಚಿನ ಅಧಿಕಾರ ಲಭ್ಯವಾಗಲಿದೆ ಎಂದು ವರದಿ ವಿವರಿಸಿದೆ. ಬೋಡೋಲ್ಯಾಂಡ್ ನ ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೋನೋವಾಲ್, ಎನ್ ಡಿಎಫ್ ಬಿ, ಎಬಿಎಸ್ ಯುನ ಪ್ರಮುಖ ನಾಯಕರು, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗರ್ಗ್ ಮತ್ತು ಅಸ್ಸಾಂ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.