ಹೊಸದಿಲ್ಲಿ: ಅಮೆರಿಕದ ದೂರಸಂಪರ್ಕ ಕಂಪೆನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರತರಲಿರುವ ಹೊಸ ಮೊಬೈಲ್‌ಗ‌ಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್‌ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್‌ 720ಜಿ, ಸ್ನ್ಯಾಪ್‌ಡ್ರಾಗನ್‌ 662 ಮತ್ತು ಸ್ನ್ಯಾಪ್‌ ಡ್ರಾಗನ್‌460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಚಿಪ್‌ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ. ಅಮೆರಿಕದ ಜಿಪಿಎಸ್‌ ವ್ಯವಸ್ಥೆಗೆ ಸೆಡ್ಡು ಹೊಡೆವ ನಿಟ್ಟಿನಲ್ಲಿ ಇಸ್ರೋ ನಾವಿಕ್‌ ಎಂಬ ಹೊಸ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದು, ಅದು ಹೆಚ್ಚಿನ ರೀತಿಯಲ್ಲಿ ಲಭ್ಯವಾಗಲು ಉಪಗ್ರಹಗಳನ್ನು ಉಡಾಯಿಸಿದೆ.