ನವದೆಹಲಿ: ಗಣ್ಯರಿಗೆ ಭದ್ರತೆ ಒದಗಿಸುವ ಕಾರ್ಯದಿಂದ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಕಮಾಂಡೊಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಶಕಗಳ ಬಳಿಕ ವಿಐಪಿ ಭದ್ರತಾ ಕಾರ್ಯಗಳಿಂದ ಬ್ಲ್ಯಾಕ್‌ ಕ್ಯಾಟ್‌ ಕಮಾಂಡೊಗಳನ್ನು ವಾಪಸ್‌ ಪಡೆಯಲಾಗುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಈ ಕಮಾಂಡೊಗಳು ಜೆಡ್‌ ಪ್ಲಸ್‌ ಶ್ರೇಣಿಯಿಂದ ಹಿಡಿದು ಇತರ 13 ಶ್ರೇಣಿಯ, ಹೆಚ್ಚಿನ ಅಪಾಯವಿರುವ ಗಣ್ಯರಿಗೆ ಭದ್ರತೆ ಒದಗಿಸುತ್ತಿವೆ. ಪ್ರತಿಯೊಬ್ಬ ಗಣ್ಯರ ಭದ್ರತೆಗೂ ಎರಡು ಡಜನ್‌ಗಳಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್‌, ಚಂದ್ರಬಾಬು ನಾಯ್ಡು, ಪ್ರಕಾಶ್‌ ಸಿಂಗ್‌ ಬಾದಲ್‌, ಮತ್ತು ಫಾರೂಕ್‌ ಅಬ್ದುಲ್ಲಾ, ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಎನ್‌ಎಸ್‌ಜಿ ಭದ್ರತೆ ಹೊಂದಿರುವ ಇತರ ಗಣ್ಯರಾಗಿದ್ದಾರೆ.