ಶುಕ್ರವಾರ, 10 ಜನವರಿ 2020
5:30 ಪೂರ್ವಾಹ್ನ
Daily PDF
ನೆಲೆಸೀತೆ ಶಾಂತಿ | ವಿಶ್ವಸಂಸ್ಥೆಯಲ್ಲಿ ಇರಾನ್-ಅಮೆರಿಕ ಶಾಂತಿ ಮಂತ್ರ ಪಠಣ
Authored by:
Basavaraj Halli
ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಪೂರ್ಣಪ್ರಮಾಣದ ಯುದ್ಧ ನಡೆಯುವ ಹಂತಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಮನಗಂಡಿರುವ ಅಮೆರಿಕ ಮತ್ತು ಇರಾನ್ ದೇಶಗಳು ಒಂದು ಹೆಜ್ಜೆ ಹಿಂದೆ ಸರಿದು ಶಾಂತಿಗಾಗಿ ಪ್ರಯತ್ನಗಳನ್ನು ಆರಂಭಿಸಿವೆ. ಎರಡೂ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 51ನೇ ಪರಿಚ್ಛೇದದ ಅನ್ವಯ ಬುಧವಾರ ತಮ್ಮ ಹೇಳಿಕೆಗಳನ್ನು ದಾಖಲಿಸಿವೆ.
'ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ನಮಗಿಲ್ಲ. ಹೀಗಾಗಿಯೇ ಸಾಕಷ್ಟು ಯೋಚಿಸಿ, ನಿರ್ದಿಷ್ಟವಾಗಿ ಅಮೆರಿಕದ ಸೇನಾ ನೆಲೆಗಳನ್ನು ನಮ್ಮ ದಾಳಿಗೆ ಗುರಿಯಾಗಿಸಿಕೊಂಡೆವು. ಇರಾಕ್‌ನ ಸಾರ್ವಭೌಮತೆಯನ್ನು ನಾವು ಗೌರವಿಸುತ್ತೇವೆ' ಎಂದು ಇರಾನ್‌ನ ರಾಯಭಾರಿ ಮಜಿದ್ ತಖ್ತ್ ರವಂಚಿ ವಿಶ್ವಸಂಸ್ಥೆಗೆ ಭರವಸೆ ನೀಡಿದರು.
'ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಗೊಳಿಸುವ ಮತ್ತು ವಿಶ್ವಶಾಂತಿ ಕಾಪಾಡುವ ಉದ್ದೇಶದಿಂದ ಇರಾನ್‌ನೊಂದಿಗೆ ಬೇಷರತ್, ಗಂಭೀರ ಮಾತುಕತೆಗೆ ಅಮೆರಿಕ ಸಿದ್ಧವಿದೆ' ಎಂದು ಅಮೆರಿಕ ರಾಯಭಾರಿ ಕೆಲ್ಲಿ ಕ್ರಾಫ್ಟ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಮ್ಮ ದೇಶದ ಪರವಾಗಿ ಲಿಖಿತ ಪ್ರತಿಕ್ರಿಯೆ ದಾಖಲಿಸಿದರು.