➤ ಚೆನ್ನೈನ ಕಲೈವಾನರ್ ಅರಂಗಂನಲ್ಲಿ ಇಂದಿನಿಂದ (ಜನವರಿ 16) 4ನೇ ಆವೃತ್ತಿಯ ಅಂತರರಾಷ್ಟ್ರೀಯ ಪುಸ್ತಕ ಮೇಳವು ಆರಂಭವಾಗುತ್ತಿದೆ. ಜನವರಿ 16ರಿಂದ 18, 2026ರವರೆಗೆ ಮೂರು ದಿನಗಳ ಸಾಹಿತ್ಯಿಕ ಹಬ್ಬದಲ್ಲಿ ಜಗತ್ತಿನ 100ಕ್ಕೂ ಹೆಚ್ಚು ದೇಶಗಳ ಪ್ರಕಾಶಕರು ಮತ್ತು ಲೇಖಕರು ಭಾಗವಹಿಸುತ್ತಿದ್ದಾರೆ. ತಮಿಳು ಸಾಹಿತ್ಯವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಮತ್ತು ವಿಶ್ವ ಸಾಹಿತ್ಯವನ್ನು ತಮಿಳಿಗೆ ತರುವ ಉದ್ದೇಶ ಹೊಂದಿರುವ ಈ ಮೇಳವು, ದಕ್ಷಿಣ ಭಾರತದ ಪ್ರಕಾಶನ ಲೋಕವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಸೆಯುವ ಪ್ರಮುಖ ಕೊಂಡಿಯಾಗಿದೆ.
4ನೇ ಆವೃತ್ತಿಯ ಅಂತರರಾಷ್ಟ್ರೀಯ ಪುಸ್ತಕ ಮೇಳದ ಘೋಷವಾಕ್ಯ: 'ನಾಗರಿಕತೆಗಳ ನಡುವಿನ ಸಂವಹನ'
➤ ತಮಿಳುನಾಡಿನ ಶಾಲಾ ಶಿಕ್ಷಣ ಸಚಿವ ಡಾ. ಅನ್ಸಿಲ್ ಮಹೇಶ್ ಪೊಯ್ಯಮೊಳಿ ಅವರು ಉದ್ಘಾಟಿಸಲಿರುವ ಈ ಮೇಳದಲ್ಲಿ ಸಂಸದೆ ಕೆ. ಕನಿಮೊಳಿ ದಿಕ್ಸೂಚಿ ಭಾಷಣ ಮಾಡಲಿದ್ದು, ಕರ್ನಾಟಕದ ಸಚಿವ ಮಧು ಬಂಗಾರಪ್ಪ ಹಾಗೂ ಕೇರಳದ ಸಚಿವ ವಿ. ಶಿವನ್‌ಕುಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
➤ ಜ. 17ರಂದು ನಡೆಯಲಿರುವ 'ಫೋರ್ ಲ್ಯಾಂಗ್ವೇಜಸ್ - ಒನ್ ಥಂಡರ್' ಎಂಬ ವಿಶೇಷ ಸಂವಾದ ಗೋಷ್ಠಿಯಲ್ಲಿ ಕನ್ನಡದ ಖ್ಯಾತ ಕವಯಿತ್ರಿ ಪ್ರತಿಭಾ ನಂದಕುಮಾರ್ ಭಾಗವಹಿಸಲಿದ್ದಾರೆ. ಈ ಗೋಷ್ಠಿಯ ನಿರ್ವಹಣೆಯನ್ನು ಕನ್ನಡದ ಲೇಖಕಿ ಡಾ. ಎಚ್.ಎಸ್. ಅನುಪಮಾ ಮಾಡಲಿದ್ದಾರೆ. ಅಲ್ಲದೆ, ಅನುವಾದಕಿ ದೀಪಾ ಭಾಸ್ತಿ ಅವರು 'ದ ಇನ್‌ವಿಸಿಬಲ್ ಹ್ಯಾಂಡ್' ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
➤ 49ನೇ ಚೆನ್ನೈ ಪುಸ್ತಕ ಮೇಳ (BAPASI): ಅಂತರರಾಷ್ಟ್ರೀಯ ಮೇಳದ ಜೊತೆಜೊತೆಗೆ, ಜನವರಿ 8 ರಿಂದ 21 ರವರೆಗೆ ನಂದನಂನ YMCA ಮೈದಾನದಲ್ಲಿ ಸಾರ್ವಜನಿಕರಿಗಾಗಿ ಬೃಹತ್ ಪುಸ್ತಕ ಮೇಳ ನಡೆಯುತ್ತಿದ್ದು, ಪ್ರತಿದಿನ ಬೆಳಗ್ಗೆ 11:00 ರಿಂದ ರಾತ್ರಿ 8:30 ರವರೆಗೆ 1,000ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪುಸ್ತಕಗಳ ಮೇಲೆ ಕನಿಷ್ಠ 10% ರಿಯಾಯಿತಿ ಹಾಗೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
➤ ತಮಿಳುನಾಡು ಅನುವಾದ ಅನುದಾನ ಯೋಜನೆ (Translation Grant): ತಮಿಳು ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ತಮಿಳುನಾಡು ಸರ್ಕಾರವು ₹3 ಕೋಟಿ ಮೊತ್ತದ ಅನುದಾನವನ್ನು ಮೀಸಲಿಟ್ಟಿದೆ. ಈ ಯೋಜನೆಯಡಿ:
=> ತಮಿಳು ಕೃತಿಗಳನ್ನು ಭಾರತದ ಇತರ ಭಾಷೆಗಳಿಗೆ (ಕನ್ನಡ ಸೇರಿದಂತೆ) ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.
=> ಅನುವಾದಕರಿಗೆ ಫೆಲೋಶಿಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
=> ಈ ಬಾರಿ ಸುಮಾರು 1,500ಕ್ಕೂ ಹೆಚ್ಚು ಅನುವಾದ ಒಪ್ಪಂದಗಳು (MoUs) ನಡೆಯುವ ನಿರೀಕ್ಷೆಯಿದೆ.
➤ ಈ ಪುಸ್ತಕ ಮೇಳವು ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಸಾಹಿತ್ಯಿಕ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದ್ದು, ಜಾಗತಿಕ ಪ್ರಕಾಶನ ಲೋಕದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುತ್ತಿದೆ.
ಶುಕ್ರವಾರ, 16 ಜನವರಿ 2026
12:12 ಅಪರಾಹ್ನ
Daily PDF
ಚೆನ್ನೈನಲ್ಲಿ ಇಂದಿನಿಂದ 4ನೇ ಅಂತರರಾಷ್ಟ್ರೀಯ ಪುಸ್ತಕ ಮೇಳ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ
Authored by:
Akshata Halli