* ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಆ್ಯಂಡಿ ಮರ್ರೆ 2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ. ಗ್ರೇಟ್ ಬ್ರಿಟನ್ ಪರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಡಲಿರುವ ಆ್ಯಂಡಿ ಮರ್ರೆ ಅವರು ಮಂಗಳವಾರ (ಜುಲೈ 23) ರಂದು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ವಿಷಯ ಹಂಚಿಕೊಂಡಿದ್ದಾರೆ.
* 'ನನ್ನ ಕೊನೆಯ ಟೆನಿಸ್ ಟೂರ್ನಿಯನ್ನು ಒಲಿಂಪಿಕ್ಸ್ ನಲ್ಲಿ ಆಡಲು ಪ್ಯಾರಿಸ್‌ಗೆ ಬಂದಿಳಿದಿದ್ದೇನೆ' ಎಂದು 37 ವರ್ಷ ವಯಸ್ಸಿನ ಬ್ರಿಟನ್‌ನ ಅಗ್ರ ಸಿಂಗಲ್ಸ್ ಆಟಗಾರ ಮರ್ರೆ ಹೇಳಿದ್ದಾರೆ.
* ಮರ್ರೆ ಅವರು ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 121ನೇ ಸ್ಥಾನದಲ್ಲಿದ್ದಾರೆ. ಅಗಾಗ ಗಾಯದ ಸಮಸ್ಯೆಗೆ ಅವರು ಒಳಗಾಗುತ್ತಿದ್ದಾರೆ. ಕೆಲಸಮಯದಿಂದ ಪಾದದ ನೋವಿನಿಂದಲೂ ಬಳಲುತ್ತಿದ್ದಾರೆ. ಬೆನ್ನು ಹುರಿಯಲ್ಲಿದ್ದ ಗಡ್ಡೆಯನ್ನು ತೆಗೆದುಹಾಕಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪೂರ್ಣವಾಗಿ ಚೇತರಿಸದ ಕಾರಣ ಅವರು ವಿಂಬಲ್ಡನ್ ಸಿಂಗಲ್ಸ್ ನಿಂದ ಹಿಂದೆಸರಿದಿದ್ದರು. ಸಹೋದರ ಜೇಮಿ ಜೊತೆ ಡಬಲ್ಸ್‌ನಲ್ಲಿ ಆಡಿದ್ದರೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.
* 'ನಾನು ಈ ಆಟವನ್ನು ಸದಾ ಆಡಬಯಸುತ್ತೇನೆ. ನಾನು ಟೆನಿಸ್‌ನಿಂದ ಸಾಕಷ್ಟು ಪಡೆದಿದ್ದೇನೆ. ಈ ಆಟವು ವೃತ್ತಿಜೀವನದಲ್ಲಿ ಸಾಕಷ್ಟು ಪಾಠಗಳನ್ನೂ ಕಲಿಸಿದೆ. ಮುಂದೆ ಅವು ಉಪಯೋಗಕ್ಕೆ ಬರಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ಮರ್ರೆ ಬರೆದಿದ್ದಾರೆ.
* 2013ರಲ್ಲಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆಲುವು ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ತಮ್ಮ ದೀರ್ಘಕಾಲದ ಎದುರಾಳಿ ನೊವಾಕ್ ಜೊಕೊವಿಚ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ್ದರು. ಇದರ ಜೊತೆಗೆ ಅವರು 2012 ಮತ್ತು 2016ರಲ್ಲಿ ಅಮೆರಿಕ ಓಪನ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು.
* 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿ ತವರಿನಲ್ಲಿ ಟೆನಿಸ್ ಸಿಂಗಲ್ಸ್ ಚಾಂಪಿಯನ್ ಆಗಿದ್ದು ಅವರ ಪಾಲಿಗೆ ಭಾವನಾತ್ಮಕ ಗೆಲುವು.
* ರಿಯೊ ಒಲಿಂಪಿಕ್ಸ್ ನಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಮಣಿಸಿ ಸತತ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಮೊದಲ ಟೆನಿಸಿಗನೆಂಬ ಗೌರವಕ್ಕೆ ಪಾತ್ರರಾದರು.
* 2015ರಲ್ಲಿ ಬ್ರಿಟನ್ ಡೇವಿಸ್ ಕಪ್ ಗೆಲುವಿನಲ್ಲಿ ಮರ್ರೆ ಅವರ ಪಾತ್ರ ಪ್ರಮುಖ. ಇದು 79 ಶ್ರೇ ವರ್ಷಗಳಲ್ಲಿ ಬ್ರಿಟನ್‌ಗೆ ಒಲಿದ ಮೊದಲ ಡೇವಿಸ್ ಕಪ್ ಆಗಿತ್ತು.
* ಅವರು ಟೆನಿಸ್ ವೃತ್ತಿಜೀವನದಲ್ಲಿ ಒಟ್ಟು 46 ಪ್ರಶಸ್ತಿಗಳನ್ನು ಪಡೆದ್ಕೊಂಡಿದ್ದಾರೆ. ಬಹುಮಾನ ಮೊತ್ತವಾಗಿ ಅವರು ಸುಮಾರು ₹544 ಕೋಟಿ ಗೆದ್ದಿದ್ದಾರೆ.
ಬ್ರಿಟನ್‌ನ ಸ್ಟಾರ್ ಟೆನ್ನಿಸ್ ಆಟಗಾರ ‘ಆ್ಯಂಡಿ ಮರ್ರೆ’ ನಿವೃತ್ತಿ ಘೋಷಣೆ
Published by Yallamma G
24 ಜುಲೈ 2024