➤ ಕರ್ನಾಟಕದ ಇತಿಹಾಸವೆಂದರೆ ಕೇವಲ ಭವ್ಯ ಕೋಟೆಗಳು, ಅರಸರ ದಂಡಯಾತ್ರೆಗಳು ಮತ್ತು ಯುದ್ಧಗಳ ಕಥೆಯಷ್ಟೇ ಅಲ್ಲ; ಸ್ಥಳೀಯವಾಗಿ ಸಿಗುವ ಪುರಾತನ ಅವಶೇಷಗಳು ಕೂಡ ನಮ್ಮ ಮರೆತುಹೋದ ಪರಂಪರೆಯ ಕನ್ನಡಿಯಾಗಿರುತ್ತವೆ. ಹಳೆಯ ಕಾಲದ ನಾಣ್ಯಗಳು ಕೇವಲ ವಿನಿಮಯದ ಮಾಧ್ಯಮಗಳಲ್ಲ, ಬದಲಿಗೆ ಆಯಾ ಕಾಲಘಟ್ಟದ ಆರ್ಥಿಕ ಸ್ಥಿತಿಗತಿ, ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಬಿಚ್ಚಿಡುವ ಜ್ಞಾನದ ಖಜಾನೆಗಳಾಗಿವೆ. ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಪರೂಪದ ಐತಿಹಾಸಿಕ ನಿಧಿಯೊಂದು ಅನಿರೀಕ್ಷಿತವಾಗಿ ಬೆಳಕಿಗೆ ಬಂದಿದೆ.
➤ ಘಟನೆಯ ಹಿನ್ನೆಲೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗೋಪನಹಳ್ಳಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಗೋಪನಹಳ್ಳಿ ಗ್ರಾಮದ ರಂಗಮ್ಮ ಎಂಬುವರಿಗೆ ಸೇರಿದ ಪಾಳುಬಿದ್ದ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಸತ್ತಿದ್ದ ಸಣ್ಣ ಆಮೆಯೊಂದಕ್ಕೆ ಸಂಸ್ಕಾರ (ಹೂಳಲು) ಮಾಡಲು ಮಕ್ಕಳು ನೆಲವನ್ನು ಅಗೆಯುತ್ತಿದ್ದರು. ನೆಲ ಅಗೆಯುವಾಗ ಅನಿರೀಕ್ಷಿತವಾಗಿ ಮಣ್ಣಿನ ಅಡಿಯಲ್ಲಿ ಸಣ್ಣ ಮಣ್ಣಿನ ಕುಡಿಕೆಯೊಂದು (ಚೆಂಬು) ಪತ್ತೆಯಾಗಿದೆ. ಕುಡಿಕೆಯನ್ನು ಹೊರತೆಗೆದು ಪರಿಶೀಲಿಸಿದಾಗ ಅದರೊಳಗೆ ಹಳೆಯ ಕಾಲದ ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳು ಇರುವುದು ಕಂಡುಬಂದಿದೆ.   
➤ ಅಧಿಕಾರಿಗಳ ಭೇಟಿ ಮತ್ತು ನಾಣ್ಯಗಳ ವಶ: ಮಕ್ಕಳಿಗೆ ನಿಧಿ ಸಿಕ್ಕಿರುವ ಸುದ್ದಿ ಗ್ರಾಮದಲ್ಲಿ ಕಾರ್ಮೋಡದಂತೆ ಹಬ್ಬಿತ್ತು.. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಚಳ್ಳಕೆರೆ ತಹಶೀಲ್ದಾರ್ ರಹೆನ್ ಪಾಶಾ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಡಿಕೆಯಲ್ಲಿದ್ದ ಒಟ್ಟು 26 ಅಪರೂಪದ ನಾಣ್ಯಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ನಂತರ ಇತಿಹಾಸ ಹಾಗೂ ಇದರ ಕಾಲಮಾನವನ್ನು ಪತ್ತೆ ಹಚ್ಚಲು ಈ ನಾಣ್ಯಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.   
➤ ಪತ್ತೆಯಾದ ನಾಣ್ಯಗಳ ವಿಶೇಷತೆಗಳು: ಪುರಾತತ್ವ ಇಲಾಖೆ ಹಾಗೂ ಹವ್ಯಾಸಿ ನಾಣ್ಯ ಸಂಶೋಧಕರ ನೆರವಿನಿಂದ ಈ ನಾಣ್ಯಗಳನ್ನು ಪರಿಶೀಲಿಸಲಾಗಿದ್ದು, ಇವುಗಳಲ್ಲಿ ಒಟ್ಟು 6 ಬೆಳ್ಳಿಯ ನಾಣ್ಯಗಳು ಮತ್ತು 20 ತಾಮ್ರದ ನಾಣ್ಯಗಳು ಸೇರಿವೆ:   
- ಬೆಳ್ಳಿಯ ನಾಣ್ಯಗಳು: ಇವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯ 1840ರ ಅವಧಿಯ 4 ನಾಣ್ಯಗಳು, 1857ರ ನಂತರದ ಬ್ರಿಟಿಷ್ ಇಂಡಿಯಾದ 2 ನಾಣ್ಯಗಳು (3 ಒಂದು ರೂಪಾಯಿ ನಾಣ್ಯಗಳು, 2 ಅರ್ಧ ರೂಪಾಯಿ ನಾಣ್ಯಗಳು ಹಾಗೂ 1 ಎರಡು ಆಣೆ ನಾಣ್ಯ) ಸೇರಿವೆ. ಇವುಗಳನ್ನು ಮುಂಬೈ, ಕಲ್ಕತ್ತಾ ಮತ್ತು ಮದ್ರಾಸ್ ಟಂಕಸಾಲೆಗಳಲ್ಲಿ ಮುದ್ರಿಸಲಾಗಿದೆ.   
- ಇತರ ಕಾಲದ ನಾಣ್ಯಗಳು: ಮೈಸೂರು ಒಡೆಯರು, ಟಿಪ್ಪು ಸುಲ್ತಾನ್ ಹಾಗೂ ಫರೂಕ್ ಕಾಲಕ್ಕೆ ಸೇರಿದ ಅಪರೂಪದ ನಾಣ್ಯಗಳು ಕೂಡ ಇದರಲ್ಲಿದ್ದು, ಇತಿಹಾಸಕಾರರಿಗೆ ಇದು ಹೆಚ್ಚಿನ ಅಧ್ಯಯನಕ್ಕೆ ಒದಗಿದೆ.