* ಮನೆ ಬಾಗಿಲಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ಔಷಧ ವಿತರಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ಫೆಬ್ರುವರಿಯಿಂದ ರಾಜ್ಯದಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
* ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ ಒದಗಿಸಿ, ಔಷಧಗಳ ಕಿಟ್‌ಗಳನ್ನು ದಾಸ್ತಾನು ಮಾಡಿಕೊಂಡಿದೆ. ಈ ಯೋಜನೆಗೆ 2024ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿ ಕೋಲಾರದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು.
* ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳಿಗೆ ಅಗತ್ಯ ತರಬೇತಿ ಒದಗಿಸಲಾಗಿದೆ. ವೈದ್ಯರನ್ನೊಳಗೊಂಡ ತಂಡವು ಮೊದಲು ಗ್ರಾಮೀಣ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಬಳಿಕ ನಗರದ ಮನೆಗಳಲ್ಲಿ ತಪಾಸಣೆ ನಡೆಸಲಿದೆ.
* ಈ ಯೋಜನೆಯಡಿ ಪ್ರತಿ ಮನೆಗೂ ತೆರಳಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪಾಸಣೆ ಮಾಡಲಾಗುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನೂ ನೀಡಲಾಗುತ್ತದೆ.
* ಈ ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ, ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ಒದಗಿಸಲಾಗುತ್ತದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಈ ತಪಾಸಣೆ ನಡೆಯಲಿದ್ದು, ದಿನಕ್ಕೆ ತಲಾ 15 ಮನೆಗಳಿಗೆ ತಂಡಗಳು ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿವೆ.
* ಬಾಯಿ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆಯೂ ತಪಾಸಣೆ ನಡೆಸಿ, ದೃಢ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯಡಿ (ಎಬಿ–ಪಿಎಂಜೆಎವೈ) ತೃತೀಯ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.
ಬುಧವಾರ, 15 ಜನವರಿ 2025
4:37 ಅಪರಾಹ್ನ
Daily PDF
ಆರೋಗ್ಯ ಇಲಾಖೆ : ನಾಡಿನಾದ್ಯಂತ 'ಗೃಹ ಅರೋಗ್ಯ' ಯೋಜನೆ ಜಾರಿ
Authored by:
Bhagya R K