➤ ಯುನೆಸ್ಕೋ (UNESCO - United Nations Educational, Scientific and Cultural Organization) ತನ್ನ ವಿಶ್ವ ಪರಂಪರೆಯ ಪಟ್ಟಿಗೆ (World Heritage List) ಭಾರತದ ಮೂರು ಪ್ರಮುಖ ತಾಣಗಳನ್ನು ತಾತ್ಕಾಲಿಕ ಪಟ್ಟಿಗೆ (Tentative List) ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ಭಾರತದ ಖಾಯಂ ಯುನೆಸ್ಕೋ ಪ್ರತಿನಿಧಿ ಮಂಡಳಿಯು ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಈ ಪ್ರಮುಖ ಹೆಜ್ಜೆ ಇಡಲಾಗಿದ್ದು, ಇದರೊಂದಿಗೆ ಭಾರತದಲ್ಲಿ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿರುವ ಒಟ್ಟು ತಾಣಗಳ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ.
➤ ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡ ಆ 3 ಹೊಸ ತಾಣಗಳು: ಈ ಬಾರಿ ಸೇರ್ಪಡೆಗೊಂಡಿರುವ 3 ತಾಣಗಳಲ್ಲಿ 2 ಪ್ರಾಕೃತಿಕ (Natural) ತಾಣಗಳು ಮತ್ತು 1 ಸಾಂಸ್ಕೃತಿಕ (Cultural) ತಾಣ ಸೇರಿವೆ:
1. ಬರಾಟಂಗ್ ಕಾರ್ಸ್ಟ್ ಮತ್ತು ಮಡ್ ವೊಲ್ಕೆನೋ ಕಾಂಪ್ಲೆಕ್ಸ್ (Karst-Mud-Volcano Complex of Baratang) – ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಪ್ರಾಕೃತಿಕ)
2. ಅಂಡಮಾನ್ ಸಬ್ಡಕ್ಷನ್ ಜ್ವಾಲಾಮುಖಿಗಳು (Andaman Subduction Volcanoes) – ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಪ್ರಾಕೃತಿಕ)
3. ಸಿರ್ಪುರ್ ಸಾಂಸ್ಕೃತಿಕ ಮತ್ತು ಪುರಾತತ್ವ ಭೂದೃಶ್ಯ (Sirpur Cultural and Archaeological Landscape) – ಛತ್ತೀಸ್ಗಢ (ಸಾಂಸ್ಕೃತಿಕ)
➤ ಈ ಮೂರು ತಾಣಗಳ ವಿವರವಾದ ಮಾಹಿತಿ:
1. ಬರಾಟಂಗ್ ಮಡ್-ಕಾರ್ಸ್ಟ್-ವೊಲ್ಕೆನೋ ಕಾಂಪ್ಲೆಕ್ಸ್ (ಅಂಡಮಾನ್ ಮತ್ತು ನಿಕೋಬಾರ್):
- ಬಂಗಾಳಕೊಲ್ಲಿಯ ಬರಾಟಂಗ್ ದ್ವೀಪವು ಸುಣ್ಣದ ಕಲ್ಲಿನ ಗುಹೆಗಳು (Limestone Caves), ಕಾರ್ಸ್ಟ್ ರಚನೆಗಳು ಮತ್ತು ಮಣ್ಣಿನ ಜ್ವಾಲಾಮುಖಿಗಳಿಗೆ (Mud Volcanoes) ಹೆಸರುವಾಸಿಯಾಗಿದೆ.
- ಇಲ್ಲಿನ ಮಣ್ಣಿನ ಜ್ವಾಲಾಮುಖಿಗಳನ್ನು ಸ್ಥಳೀಯವಾಗಿ ‘ಜಲ್ಕಿ’ (Jalki) ಎಂದು ಕರೆಯುತ್ತಾರೆ. ಇವು ಲಾವಾರಸವನ್ನು ಉಗುಳುವುದಿಲ್ಲ, ಬದಲಿಗೆ ಮಣ್ಣು, ನೀರು ಮತ್ತು ಅನಿಲವನ್ನು ಹೊರಹಾಕುತ್ತವೆ.
- ದೀರ್ಘಕಾಲದ ನಿಷ್ಕ್ರಿಯತೆಯ ನಂತರ ಇವು ಇತ್ತೀಚೆಗೆ ಮತ್ತೊಮ್ಮೆ ಸಕ್ರಿಯಗೊಂಡಿರುವುದು ವಿಶೇಷ.
2. ಅಂಡಮಾನ್ ಸಬ್ಡಕ್ಷನ್ ಜ್ವಾಲಾಮುಖಿಗಳು (ಅಂಡಮಾನ್ ಸಮುದ್ರ):
- ಅಂಡಮಾನ್ ಸಮುದ್ರದಲ್ಲಿರುವ ಬರ್ರೆನ್ ದ್ವೀಪ (Barren Island) ಮತ್ತು ನಾರ್ಕೋಂಡಮ್ ದ್ವೀಪ (Narcondam Island) ಈ ಪ್ರಸ್ತಾವನೆಯಲ್ಲಿ ಒಳಗೊಂಡಿವೆ.
- ಭಾರತೀಯ ಫಲಕವು (Indian Plate) ಬರ್ಮಾ ಮೈಕ್ರೋಫಾಲಕದ ಕೆಳಗೆ ಚಲಿಸುವ (Subduction) ಪ್ರಕ್ರಿಯೆಯಿಂದ ರೂಪುಗೊಂಡ ಜ್ವಾಲಾಮುಖಿ ಚಟುವಟಿಕೆಗಳನ್ನು ಇವು ಪ್ರತಿನಿಧಿಸುತ್ತವೆ.
- ಬರ್ರೆನ್ ದ್ವೀಪವು ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ. ನಾರ್ಕೋಂಡಮ್ ದ್ವೀಪವು ವಿಶಿಷ್ಟ ಜ್ವಾಲಾಮುಖಿ ಭೂವಿಜ್ಞಾನದ ಜೊತೆಗೆ ಅಪರೂಪದ ಜೀವವೈವಿಧ್ಯತೆ ಮತ್ತು ಪ್ರಮುಖ ಪಕ್ಷಿಧಾಮ ಕ್ಷೇತ್ರವಾಗಿದೆ.
3. ಸಿರ್ಪುರ್ ಸಾಂಸ್ಕೃತಿಕ ಮತ್ತು ಪುರಾತತ್ವ ಭೂದೃಶ್ಯ (ಛತ್ತೀಸ್ಗಢ):
- ಮಹಾನದಿಯ ಪೂರ್ವ ದಂಡೆಯ ಮೇಲೆ, ರಾಯ್ಪುರದಿಂದ ಸುಮಾರು 78 ಕಿ.ಮೀ ದೂರದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿ ಸಿರ್ಪುರ್ ನೆಲೆಗೊಂಡಿದೆ.
- ಇದು ಪ್ರಾಚೀನ ಕಾಲದ ವ್ಯಾಪಾರ ಮಾರ್ಗಗಳು, ನಗರೀಕರಣ ಮತ್ತು ವಿವಿಧ ಧರ್ಮಗಳ (ಹಿಂದೂ, ಬೌದ್ಧ ಇತ್ಯಾದಿ) ಸೌಹಾರ್ದಯುತ ಸಹಬಾಳ್ವೆಯನ್ನು ಬಿಂಬಿಸುವ ಐತಿಹಾಸಿಕ ತಾಣವಾಗಿದೆ.
- ಇಲ್ಲಿನ ಪುರಾತತ್ವ ಸ್ಮಾರಕಗಳು ಮತ್ತು ಪ್ರಾಟೆರೊಜೋಯಿಕ್ ಛತ್ತೀಸ್ಗಢ ಜಲಾನಯನ ಪ್ರದೇಶದ ಸ್ಟ್ರೊಮಾಟೊಲೈಟ್ಗಳು (Stromatolites) ಈ ತಾಣಕ್ಕೆ ಅಪಾರ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವವನ್ನು ತಂದುಕೊಟ್ಟಿವೆ.
➤ಯುನೆಸ್ಕೋ ತಾತ್ಕಾಲಿಕ ಪಟ್ಟಿಯ (Tentative List) : ಯಾವುದೇ ದೇಶವು ತನ್ನ ರಾಷ್ಟ್ರೀಯ ಪ್ರಾಮುಖ್ಯತೆಯ ಸಾಂಸ್ಕೃತಿಕ ಅಥವಾ ಪ್ರಾಕೃತಿಕ ತಾಣಗಳನ್ನು ಮುಂಬರುವ ದಿನಗಳಲ್ಲಿ ವಿಶ್ವ ಪರಂಪರೆಯ ಪಟ್ಟಿಗೆ (World Heritage List) ಸೇರಿಸಲು ಪರಿಗಣಿಸಬೇಕೆಂದು ಬಯಸಿದರೆ, ಮೊದಲು ಅವುಗಳನ್ನು 'ತಾತ್ಕಾಲಿಕ ಪಟ್ಟಿ'ಯಲ್ಲಿ ನೋಂದಾಯಿಸಬೇಕು. ಇದು ಅಧಿಕೃತ ನಾಮನಿರ್ದೇಶನದ ಕಡ್ಡಾಯ ಹಾಗೂ ಪ್ರಾಥಮಿಕ ಹಂತವಾಗಿದೆ.
UNESCO Tentative List: ಯುನೆಸ್ಕೋದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಭಾರತದ 3 ಹೊಸ ತಾಣಗಳು ಸೇರ್ಪಡೆ!
Published by Heena Sheregar
1 hour ago