➤ ದಾನ್‌ವೀರ್ ಪ್ಲಾಟ್‌ಫಾರ್ಮ್: ಗ್ರಾಮೀಣ ಪಂಚಾಯತ್‌ಗಳ ಡಿಜಿಟಲ್ ಮೂಲಸೌಕರ್ಯ ಬಲಪಡಿಸಲು ಮತ್ತು ಕಂಪ್ಯೂಟರ್ ಉಪಕರಣಗಳ ದೇಣಿಗೆಗೆ ಅನುವು ಮಾಡಿಕೊಡಲು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 'ಮೇರಿ ಪಂಚಾಯತ್' ಆಪ್ ಮೂಲಕ 'ದಾನ್‌ವೀರ್' ನಾಗರಿಕ ಸಹಭಾಗಿತ್ವ ವೇದಿಕೆಯನ್ನು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದೆ.
➤ ಕೋಸಿ-ಮೇಚಿ ನದಿ ಜೋಡಣೆ ಯೋಜನೆ: ಬಿಹಾರದಲ್ಲಿ ಪ್ರವಾಹ ನಿಯಂತ್ರಣ ಹಾಗೂ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ಕೇಂದ್ರ ಸರ್ಕಾರವು ₹6,000 ಕೋಟಿಗೂ ಹೆಚ್ಚಿನ ವೆಚ್ಚದ 'ಕೋಸಿ-ಮೇಚಿ' ಒಳನಾಡು ನದಿ ಜೋಡಣೆ ಯೋಜನೆಗೆ ಅನುಮೋದನೆ ನೀಡಿದ್ದು, ಮಾರ್ಚ್ 2029 ರೊಳಗೆ ಪೂರ್ಣಗೊಳಿಸುವ ಗಡುವು ನಿಗದಿಪಡಿಸಿದೆ.
➤ ಸೈಬರ್ ವಂಚನೆ ತಡೆಗೆ 'ಇ-ಜೀರೋ ಎಫ್‌ಐಆರ್': ಸೈಬರ್ ಹಣಕಾಸು ವಂಚನೆಗೊಳಗಾದ ಸಂತ್ರಸ್ತರು ಮನೆಯಲ್ಲೇ ಕುಳಿತು '1930' ಸಹಾಯವಾಣಿ ಮೂಲಕ ಸುಲಭವಾಗಿ ದೂರು ದಾಖಲಿಸಲು ಗುಜರಾತ್ ಸರ್ಕಾರವು ಗಾಂಧಿನಗರದಲ್ಲಿ ಅತ್ಯಾಧುನಿಕ 'ಸೈಬರ್ ಫೈನಾನ್ಶಿಯಲ್ ಫ್ರಾಡ್ ಇ-ಜೀರೋ ಎಫ್‌ಐಆರ್' ವ್ಯವಸ್ಥೆಯನ್ನು ಜಾರಿಗೆ ತಂದಿದೆ.
➤ ದಕ್ಷಿಣ ಆಫ್ರಿಕಾ ETA ವ್ಯವಸ್ಥೆ: ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳು ವೀಸಾ ಕೇಂದ್ರಗಳಿಗೆ ತೆರಳದೆ ಆನ್‌ಲೈನ್‌ನಲ್ಲೇ 90 ದಿನಗಳ ಅಲ್ಪಾವಧಿ ಡಿಜಿಟಲ್ ವೀಸಾ ಪಡೆಯಲು ದಕ್ಷಿಣ ಆಫ್ರಿಕಾ ಸರ್ಕಾರವು 'ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ (ETA)' ವ್ಯವಸ್ಥೆಯನ್ನು ಪರಿಚಯಿಸಿದೆ.
➤ ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆ: ಕರ್ನಾಟಕ ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯು ರೈತರು ತಮ್ಮ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಪ್ರೋತ್ಸಾಹಿಸುವ 'ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆ'ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.
➤ ವೆಬ್ ಸೀರೀಸ್ 'ಆಪರೇಷನ್ ಸಫೇದ್ ಸಾಗರ್': 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಸೇನೆಯ 'ಗೋಲ್ಡನ್ ಆರೋಸ್' ಸ್ಕ್ವಾಡ್ರನ್ ಹಾಗೂ ವೀರಮರಣ ಹೊಂದಿದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಅವರ ಸಾಹಸಗಾಥೆಯನ್ನು ಬಿಂಬಿಸುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್ ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ.
➤ ಅಳಿವಿನಂಚಿನಲ್ಲಿ ಮಾಲ್ವಿ ಒಂಟಿ ತಳಿ: ಭಾರತದ 9 ಅಧಿಕೃತ ಒಂಟಿ ತಳಿಗಳಲ್ಲಿ ಒಂದಾದ ಹಾಗೂ ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿ ಕಂಡುಬರುವ ಬಿಳಿ ಬಣ್ಣದ ಸಣ್ಣ ಗಾತ್ರದ 'ಮಾಲ್ವಿ ಒಂಟೆ' ತಳಿಯ ಸಂಖ್ಯೆ ತೀವ್ರವಾಗಿ ಕುಸಿದಿದ್ದು, ಇದನ್ನು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ.