➤ ಆಹಾರ ಸುರಕ್ಷತೆ ಮತ್ತು ಔಷಧಗಳ ಆಡಳಿತ ಇಲಾಖೆಯ ಆಯುಕ್ತರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ಸೆಕ್ಷನ್ 30(2)(a) ಅಡಿಯಲ್ಲಿ ಪ್ರಸಾರ ಮಾಡಲಾದ ಅಧಿಕಾರವನ್ನು ಬಳಸಿ ಈ ಮಹತ್ವದ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
➤ ನಿಷೇಧಕ್ಕೆ ಒಳಪಡುವ ಉತ್ಪನ್ನಗಳು:
- ಗುಟ್ಕಾ ಮತ್ತು ಪಾನ್ ಮಸಾಲಾ: ತಂಬಾಕು ಅಥವಾ ನಿಕೋಟಿನ್ ಅನ್ನು ಘಟಕಾಂಶವಾಗಿ ಹೊಂದಿರುವ ಯಾವುದೇ ಮಾದರಿಯ ಪಾಕೆಟ್, ಸ್ಯಾಚೆ (Sachet) ಹಾಗೂ ಕಂಟೈನರ್‌ಗಳು.
- ಟ್ವಿನ್ ಪ್ಯಾಕ್/ಮಿಕ್ಸಿಂಗ್ ಉತ್ಪನ್ನಗಳು (Twin-pack mixing): ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಗ್ರಾಹಕರು ಸುಲಭವಾಗಿ ಬೆರೆಸಿ ಸೇವಿಸುವಂತೆ ಮಾರಾಟ ಮಾಡುವ ತಂತ್ರಜ್ಞಾನ ಆಧಾರಿತ ಪ್ಯಾಕೆಟ್‌ಗಳಿಗೂ ಈ ನಿಷೇಧ ಅನ್ವಯಿಸುತ್ತದೆ.
- ರಾಜ್ಯಾದ್ಯಂತ ಇವುಗಳ ತಯಾರಿಕೆ, ಶೇಖರಣೆ, ವಿತರಣೆ, ಸಾಗಾಣಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
➤ ಸಂವಿಧಾನಾತ್ಮಕ ಮತ್ತು ಕಾನೂನು ಚೌಕಟ್ಟು: ರಾಜ್ಯ ನೀತಿಯ ನಿರ್ದೇಶಕ ತತ್ವಗಳ (DPSP) ಪ್ರಕಾರ, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಮತ್ತು ಆರೋಗ್ಯಕ್ಕೆ ಹಾನಿಕರವಾದ ಮಾದಕ ಪಾನೀಯ ಹಾಗೂ ದ್ರವ್ಯಗಳನ್ನು ನಿಷೇಧಿಸುವುದು ರಾಜ್ಯ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. Section 30(2)(a): ರಾಜ್ಯದ ಆಹಾರ ಸುರಕ್ಷತಾ ಆಯುಕ್ತರಿಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಆಹಾರ ಪದಾರ್ಥದ ಉತ್ಪಾದನೆ ಅಥವಾ ಮಾರಾಟವನ್ನು ರಾಜ್ಯಾದ್ಯಂತ ತಾತ್ಕಾಲಿಕವಾಗಿ ನಿಷೇಧಿಸುವ ಅಧಿಕಾರ ನೀಡುತ್ತದೆ.
COTPA ಕಾಯಿದೆ 2003: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಹಾಗೂ ವ್ಯಾಪಾರ-ವಹಿವಾಟು ನಿಯಂತ್ರಣಕ್ಕೆ ಸಂಬಂಧಿಸಿದ ಕೇಂದ್ರ ಕಾಯಿದೆ. (ಇತ್ತೀಚೆಗೆ ಕರ್ನಾಟಕ ಸರ್ಕಾರವು ಹುಕ್ಕಾ ಬಾರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು COTPA ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು).