* ಆತಂಕಕಾರಿ ಮಟ್ಟದಲ್ಲಿ ದೆಹಲಿಯ ವಾಯು ಮಾಲಿನ್ಯ ಏರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವನ್ನು ಗಮನಿಸಿರುವ ಸುಪ್ರೀಂ ಕೋರ್ಟ್, GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ಸ್ಥಾಪಿಸುವಂತೆ ದೆಹಲಿ-ಎನ್‌ಸಿಆರ್ ರಾಜ್ಯಗಳಿಗೆ ಸೂಚಿಸಿದೆ.
* ಈ ನಿರ್ಬಂಧಗಳು ವಾಯುಗುಣಮಟ್ಟ 450 ಕ್ಕಿಂತಲೂ ಕಡಿಮೆ ಇದ್ದರೂ ಸಹ ಜಾರಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
* ದೇಶದ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೋಮವಾರ (ನವೆಂಬರ್ 18) ಇನ್ನಷ್ಟು ಹದಗೆಟ್ಟಿದ್ದು, ವಾಯುಗುಣಮಟ್ಟ ಸುಂಚ್ಯಂಕವು (AQI) 484 ಕ್ಕೆ ತಲುಪಿದೆ.
* ಸೋಮವಾರದಿಂದ GRAP 4ನೇ ಹಂತವನ್ನು ಜಾರಿಗೆ ತರಲಾಗಿದ್ದು, ಭಾರೀ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.
* ಈ ರೀತಿ AQI ಸನ್ನಿವೇಶದಲ್ಲಿ ಗಾಳಿಯು ಆರೋಗ್ಯಕ್ಕೆ ಹಾನಿ ಉಂಟುಮಾಡುವಂಥದ್ದು ಎಂದು ಪರಿಗಣಿಸಲಾಗುತ್ತದೆ. ಇದು ವಿಶೇಷವಾಗಿ ಮಕ್ಕಳು, ವಯೋವೃದ್ಧರು ಮತ್ತು ಉಸಿರಾಟ, ಹೃದಯದ ಸಮಸ್ಯೆ ಇರುವಂಥವರಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಎಎನ್‌ಐ ವರದಿ ಮಾಡಿದೆ.
* ದಟ್ಟವಾದ ಹೊಗೆ ಆವರಿಸಿದ್ದರಿಂದ ಗೋಚರತೆ ಸಮಸ್ಯೆ ಎದುರಾಗಿ ಹಲವಾರು ರೈಲುಗಳು ಮತ್ತು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕನಿಷ್ಠ 22 ರೈಲುಗಳ ಸಂಚಾರ ತಡವಾಗಿದ್ದು, 8 ವಿಮಾನಗಳ ಲ್ಯಾಂಡಿಂಗ್ ಸ್ಥಳವನ್ನು ಬದಲಾಯಿಸಲಾಗಿದೆ.
* ತೀವ್ರ ವಾಯುಮಾಲಿನ್ಯ ಮತ್ತು ಅಪಾಯಕಾರಿ ಎಕ್ಯೂಐ ಮಟ್ಟದಿಂದಾಗಿ ದಿಲ್ಲಿಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. 12ನೇ ತರಗತಿವರೆಗಿನ ಎಲ್ಲಾ ಅಧ್ಯಯನಗಳನ್ನು ಆನ್ ಲೈನ್ ಗೆ ವರ್ಗಾಯಿಸಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
* ಈ ಮಧ್ಯೆ ದಿಲ್ಲಿ ವಿಶ್ವವಿದ್ಯಾನಿಲಯವು ನವೆಂಬರ್ 23ರವರೆಗೆ ಆನ್ಲೈನ್ ತರಗತಿಗಳನ್ನು ನಡೆಸುವುದಾಗಿ ಘೋಷಿಸಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ನವೆಂಬರ್ 22ರವರೆಗೆ ಆನ್ ಲೈನ್ ತರಗತಿಗಳನ್ನು ಮಾಡುವುದಾಗಿ ಹೇಳಿಕೊಂಡಿದೆ.
ತೀವ್ರ ಹದಗೆಟ್ಟ ದೆಹಲಿಯ ವಾಯು ಗುಣಮಟ್ಟ
Published by Jyoti Angadi
19 ನವೆಂಬರ್ 2024