➤ ಕೊಲಂಬೊ: ಶ್ರೀಲಂಕಾದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ದೇಶದ ಇಂಧನ ಸಚಿವ ಕುಮಾರ ಜಯಾಕೊಡಿ ಹಾಗೂ ಸಚಿವಾಲಯದ ಕಾರ್ಯದರ್ಶಿ ಉದಯಾಂಗ ಹೇಮಾಪಾಲ ಅವರು ಶುಕ್ರವಾರ(17-04-2026) ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯು ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ರಾಷ್ಟ್ರಾಧ್ಯಕ್ಷರ ಉನ್ನತಾಧಿಕಾರ ಆಯೋಗವು ನಿರ್ಧರಿಸಿದ ಬೆನ್ನಲ್ಲೇ ಈ ರಾಜೀನಾಮೆಗಳು ಹೊರಬಂದಿವೆ.
➤ ಭ್ರಷ್ಟಾಚಾರ ಮುಕ್ತ ಸರ್ಕಾರದ ಇಮೇಜ್‌ಗೆ ಧಕ್ಕೆ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ದೂಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ರಾಜಕೀಯ ಬದಲಾವಣೆಯ ನಂತರ 'ನ್ಯಾಷನಲ್ ಪೀಪಲ್ಸ್ ಪವರ್' (NPP) ಸರ್ಕಾರವು ಭ್ರಷ್ಟಾಚಾರ ನಿರ್ಮೂಲನೆಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಕಳೆದ ವಾರವಷ್ಟೇ ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸಿದ್ದ ಈ ಸರ್ಕಾರದ ಸಚಿವರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವುದು ಮಹತ್ವದ ತಿರುವು ನೀಡಿದೆ. "ತನಿಖೆಯು ಪಾರದರ್ಶಕವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ನಡೆಯಲು ಅನುಕೂಲವಾಗುವಂತೆ ಸಚಿವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ," ಎಂದು ಅಧ್ಯಕ್ಷರ ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
➤ ವರದಿಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಶಿಷ್ಟಾಚಾರಗಳನ್ನು ಉಲ್ಲಂಘಿಸಿದೆ ಮತ್ತು ಇದರಿಂದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಅಂತರಾಷ್ಟ್ರೀಯ ಮಾಧ್ಯಮಗಳಾದ ರಾಯಿಟರ್ಸ್ ಮತ್ತು ದಿ ಹಿಂದೂ ವರದಿ ಮಾಡಿರುವಂತೆ, ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆಯೂ ಈ ತನಿಖೆಯ ವ್ಯಾಪ್ತಿಯಲ್ಲಿದೆ.
ಶ್ರೀಲಂಕಾ ಇಂಧನ ಸಚಿವ ಕುಮಾರ ಜಯಾಕೊಡಿ ರಾಜೀನಾಮೆ: ಕಲ್ಲಿದ್ದಲು ಆಮದು ಹಗರಣದ ತನಿಖೆಗೆ ಆದೇಶ
Published by Akshata Halli
18 ಏಪ್ರಿಲ್ 2026