➤ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ತಳೆದಿದೆ. ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯ ಬಳಿಕ, ಆರ್‌ಬಿಐ ಪ್ರಮುಖ ರೆಪೊ ದರವನ್ನು (Repo Rate) 25 ಮೂಲಾಂಕಗಳಷ್ಟು (0.25%) ಹೆಚ್ಚಳ ಮಾಡಿದೆ. ಇದರೊಂದಿಗೆ ಪ್ರಸ್ತುತ ರೆಪೊ ದರವು ಶೇಕಡಾ 5.25ರಿಂದ ಶೇಕಡಾ 5.50ಕ್ಕೆ ಏರಿಕೆಯಾಗಿದೆ. ಫೆಬ್ರವರಿ 2023ರ ನಂತರ ಆರ್‌ಬಿಐ ಬಡ್ಡಿದರವನ್ನು ಹೆಚ್ಚಿಸಿರುವುದು ಇದೇ ಮೊದಲ ಬಾರಿಯಾಗಿದೆ.
- ಹೊಸ ರೆಪೊ ದರ: ಶೇ. 5.50
- ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF) ದರ: ಶೇ. 5.25
- ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) & ಬ್ಯಾಂಕ್ ದರ: ಶೇ. 5.75
- ಹಣಕಾಸು ನೀತಿಯ ನಿಲುವು (Stance): 'ತಟಸ್ಥ' (Neutral) ನಿಲುವಿನಿಂದ 'ಬಿಗಿ ಹಣಕಾಸು ನೀತಿ' (Calibrated Tightening) ಗೆ ಬದಲಾವಣೆ.
- ಜಿಡಿಪಿ ಬೆಳವಣಿಗೆಯ ಅಂದಾಜು (FY27): ಶೇಕಡಾ 7.1 (ಈ ಹಿಂದೆ ಶೇ. 6.7 ಅಂದಾಜಿಸಲಾಗಿತ್ತು).
- ಚಿಲ್ಲರೆ ಹಣದುಬ್ಬರ (CPI) ಅಂದಾಜು (FY27): ಶೇಕಡಾ 5.2.
➤ ದರ ಏರಿಕೆಗೆ ಮುಖ್ಯ ಕಾರಣಗಳು:
- ಇರಾನ್ ಸಂಘರ್ಷ ಹಾಗೂ ತೈಲ ಬೆಲೆ ಏರಿಕೆ: ಪಶ್ಚಿಮ ಏಷ್ಯಾದಲ್ಲಿ (ಇರಾನ್ ಯುದ್ಧ/ಸಂಘರ್ಷ) ಬಿಕ್ಕಟ್ಟು ಹೆಚ್ಚಾಗಿದ್ದರಿಂದ ಕಚ್ಚಾ ತೈಲ (Crude Oil) ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದರಿಂದ ಜಾಗತಿಕ ಸರಕು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
- ಆಹಾರ ವಸ್ತುಗಳ ಬೆಲೆ ಏರಿಕೆ: ದೇಶೀಯವಾಗಿ ಆಹಾರ ಧಾನ್ಯಗಳು ಹಾಗೂ ತರಕಾರಿ ಬೆಲೆಗಳಲ್ಲಿ ಸ್ಥಿರತೆ ಇಲ್ಲದಿರುವುದು ಹಣದುಬ್ಬರ ಹೆಚ್ಚಾಗಲು ಕಾರಣವಾಗಿದೆ.
- ರೂಪಾಯಿ ಮೌಲ್ಯ ಹಾಗೂ ಜಾಗತಿಕ ಮಾರುಕಟ್ಟೆ: ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿನ ವ್ಯತ್ಯಾಸ ಹಾಗೂ ಜಾಗತಿಕ ಹಣಕಾಸು ಮಾರುಕಟ್ಟೆಯ ಚಂಚಲತೆಯನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
➤ 'ಬಿಗಿ ಹಣಕಾಸು ನೀತಿ': ಆರ್‌ಬಿಐ ತನ್ನ ಹಣಕಾಸು ನೀತಿ ನಿಲುವನ್ನು 'ಬಿಗಿ ಹಣಕಾಸು ನೀತಿ'ಗೆ ಬದಲಾಯಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಡ್ಡಿದರ ಕಡಿತಗೊಳಿಸುವ ಯಾವುದೇ ಆಲೋಚನೆ ಆರ್‌ಬಿಐ ಮುಂದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿದರವನ್ನು ಹೆಚ್ಚಿಸಬಹುದು ಅಥವಾ ಪ್ರಸ್ತುತ ದರವನ್ನೇ ಮುಂದುವರಿಸಬಹುದು (Pause/Hike) ವಿನಃ ಕಡಿತಗೊಳಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಆರ್‌ಬಿಐ ನೀಡಿದೆ.
➤ ಸಾಮಾನ್ಯ ಜನರ ಹಾಗೂ ಆರ್ಥಿಕತೆಯ ಮೇಲಾಗುವ ಪರಿಣಾಮ:
- ಇಎಮ್‌ಐ (EMI) ಹೊರೆ ಹೆಚ್ಚಳ: ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಸಾಲದ ದರ ಹೆಚ್ಚಿರುವುದರಿಂದ ಗೃಹ ಸಾಲ (Home Loan), ವಾಹನ ಸಾಲ (Auto Loan) ಮತ್ತು ವೈಯಕ್ತಿಕ ಸಾಲಗಳ (Personal Loan) ಬಡ್ಡಿದರ ಹಾಗೂ EMI ಹೆಚ್ಚಾಗುವ ಸಾಧ್ಯತೆಯಿದೆ.
- ಠೇವಣಿದಾರರಿಗೆ ಲಾಭ: ಸಾಲದ ದರ ಏರಿಕೆಯಾಗುವುದರ ಜೊತೆಗೆ ಬ್ಯಾಂಕುಗಳು ನಿಶ್ಚಿತ ಠೇವಣಿಗಳಿಗೆ (Fixed Deposits) ನೀಡುವ ಬಡ್ಡಿದರದಲ್ಲೂ ಏರಿಕೆ ಮಾಡಬಹುದು.
- ಧೃಢವಾದ ಭಾರತೀಯ ಆರ್ಥಿಕತೆ: ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿಯಿದ್ದರೂ, ಭಾರತದ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳು ಬಲವಾಗಿ ಮುಂದುವರಿದಿವೆ. ಹೀಗಾಗಿ ಆರ್‌ಬಿಐ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಶೇ. 7.1ಕ್ಕೆ ಹೆಚ್ಚಿಸಿದೆ.
ಆರ್‌ಬಿಐನಿಂದ ರೆಪೊ ದರ 25 ಬಿಪಿಎಸ್ ಏರಿಕೆ: ಸದ್ಯಕ್ಕಿಲ್ಲ ಬಡ್ಡಿದರ ಕಡಿತ; 'ಬಿಗಿ ಹಣಕಾಸು ನೀತಿ'ಗೆ ಆರ್‌ಬಿಐ ಮುಖ
Published by Akshata Halli
2 hours ago