* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭ ಆಗಸ್ಟ್ 28 ರಾತ್ರಿ 11.30ಕ್ಕೆ (ಭಾರತೀಯ ಕಾಲಮಾನ) ಆರಂಭಗೊಳ್ಳಲಿದೆ.
* ಒಲಿಂಪಿಕ್ಸ್ ಬಳಿಕ ಪ್ಯಾರಾಲಿಂಪಿಕ್ಸ್ ಆತಿಥ್ಯಕ್ಕೆ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಸಜ್ಜಾಗಿದೆ. ಮುಂದಿನ 12 ದಿನಗಳ ಕಾಲ ವಿಶ್ವದ 167 ದೇಶಗಳ 4400 ಕ್ರೀಡಾಪಟುಗಳು ಪದಕಗಳಿಗೆ ಸೆಣಸಲಿದ್ದಾರೆ.
* ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಪ್ಯಾರಿಸ್, ಒಲಿಂಪಿಕ್ಸ್‌ನಂತೆ ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನೂ ವಿಭಿನ್ನವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸುಮಾರು 3 ಗಂಟೆಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
* ಮೊದಲ ಬಾರಿಗೆ ಕ್ರೀಡಾಂಗಣದಿಂದ ಹೊರಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ಯಾರಿಸ್ ನಗರದ ಐತಿಹಾಸಿಕ ಸ್ಕ್ವೇರ್ ಪ್ಲೇಸ್ ಡೆ ಲಾ ಕಾನ್‌ಕೊರ್ಡ್ ಎಂಬಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
* ಪದಕ ಸ್ಪರ್ಧೆಗಳು ಆಗಸ್ಟ್ 29 ಅಂದರೆ ಗುರುವಾರದಿಂದ ಆರಂಭಗೊಳ್ಳಲಿದ್ದು, ಒಲಿಂಪಿಕ್ಸ್‌ನಂತೆಯೇ ಪ್ರತಿ ದಿನವೂ ಪದಕ ಸ್ಪರ್ಧೆಗಳು ಇರಲಿವೆ. 11 ದಿನಗಳಲ್ಲಿ 22 ಕ್ರೀಡೆಗಳ ಒಟ್ಟು 549 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.
* ಭಾರತ ಈ ಬಾರಿ 84 ಕ್ರೀಡಾಪಟುಗಳನ್ನು ಪ್ಯಾರಿಸ್‌ಗೆ ಕಳುಹಿಸಿದ್ದು, ಕನಿಷ್ಠ 25 ಪದಕಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು.
* ಕಳೆದ ಬಾರಿ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಅಗ್ರ-15ರೊಳಗೆ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದೆ. ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
* ಪ್ಯಾರಿಸ್ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟಕದ ರಕ್ಷಿತಾ ರಾಜು, ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ ಹಾಗೂ ಸಕೀನಾ ಖಾತೂನ್ ಸ್ಪರ್ಧಿಸಲಿದ್ದಾರೆ.
* ಮೂಲತಃ ಕರ್ನಾಟಕದ, ಸದ್ಯ ಉತ್ತರ ಪ್ರದೇಶದ ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಬ್ಯಾಡ್ಮಿಂಟನ್ ತಾರೆ ಸುಹಾಸ್ ಯತಿರಾಜ್ ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದು, ಈ ಬಾರಿ ಚಿನ್ನದ ನಿರೀಕ್ಷೆಯಲ್ಲಿದ್ದಾರೆ.
* 2018 ಹಾಗೂ 2023ರ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ ರಕ್ಷಿತಾ ರಾಜು, ಈ ಬಾರಿ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಸಕೀನಾ ಖಾತೂನ್ ಮಹಿಳೆಯರ 45 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ, ಶ್ರೀಹರ್ಷ ಶೂಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಬುಧವಾರ, 28 ಆಗಸ್ಟ್ 2024
11:16 ಪೂರ್ವಾಹ್ನ
Daily PDF
ಪ್ಯಾರಾ ಕ್ರೀಡಾಪಟುಗಳ ಹಬ್ಬಕ್ಕೆ ಪ್ಯಾರಿಸ್ ಸಜ್ಜು; ದಾಖಲೆ ಪದಕ ಗೆಲ್ಲುವ ವಿಶ್ವಾಸದಲ್ಲಿ ಭಾರತ
Authored by:
Jyoti Angadi