➤ ಭಾರತವು ಡಿಜಿಟಲ್ ಮೂಲಸೌಕರ್ಯ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ಬಿಡುಗಡೆಯಾದ 'ನೆಟ್‌ವರ್ಕ್ ಸಿದ್ಧತೆ ಸೂಚ್ಯಂಕ 2025' (Network Readiness Index - NRI 2025) ವರದಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನಗಳ ಏರಿಕೆ ಕಂಡು 45ನೇ ಸ್ಥಾನವನ್ನು ಅಲಂಕರಿಸಿದೆ. ವಾಷಿಂಗ್ಟನ್ ಡಿಸಿ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ 'ಪೋರ್ಚುಲನ್ಸ್ ಇನ್ಸ್ಟಿಟ್ಯೂಟ್' (Portulans Institute) ಫೆಬ್ರವರಿ 4, 2026 ರಂದು ಈ ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಡಿಜಿಟಲ್ ಪ್ರಗತಿ, ಟೆಲಿಕಾಂ ಹೂಡಿಕೆ ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ಈ ವರದಿಯು ಶ್ಲಾಘಿಸಿದೆ.ಜಾಗತಿಕ ಶ್ರೇಯಾಂಕ: 45 (127 ದೇಶಗಳ ಪೈಕಿ). ಭಾರತದ ಸ್ಕೋರ್: 54.43 (2024ರಲ್ಲಿ 53.63 ಇತ್ತು). ಆದಾಯ ಗುಂಪು: ಕೆಳ-ಮಧ್ಯಮ ಆದಾಯದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 2ನೇ ಸ್ಥಾನ.
➤ ಭಾರತ ನಂ.1 ಸಾಧಿಸಿದ ಕ್ಷೇತ್ರಗಳು : ಈ ವರದಿಯ ಪ್ರಕಾರ:
1. ದೂರಸಂಪರ್ಕ ಸೇವೆಗಳಲ್ಲಿ ವಾರ್ಷಿಕ ಹೂಡಿಕೆ: ಪ್ರಥಮ ಸ್ಥಾನ.
2. AI ವೈಜ್ಞಾನಿಕ ಪ್ರಕಟಣೆಗಳು: ಕೃತಕ ಬುದ್ಧಿಮತ್ತೆ ಸಂಶೋಧನೆಯಲ್ಲಿ ಅಗ್ರಗಣ್ಯ.
3. ICT ಸೇವೆಗಳ ರಫ್ತು: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಮುಂಚೂಣಿ.
4. ಇ-ಕಾಮರ್ಸ್ ಶಾಸನಗಳು: ಡಿಜಿಟಲ್ ವ್ಯವಹಾರಗಳಿಗೆ ಪೂರಕವಾದ ಕಾನೂನು ಚೌಕಟ್ಟು.
5. FTTH (Fiber-to-the-Home): ಫೈಬರ್ ಇಂಟರ್ನೆಟ್ ಬಳಕೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನ.
6. ಮೊಬೈಲ್ ಬ್ರಾಡ್‌ಬ್ಯಾಂಡ್ ಟ್ರಾಫಿಕ್: ಅತೀ ಹೆಚ್ಚು ಡೇಟಾ ಬಳಕೆಯಲ್ಲಿ 2ನೇ ಸ್ಥಾನ.
7. ಮಾರುಕಟ್ಟೆ ಗಾತ್ರ: ದೇಶೀಯ ಮಾರುಕಟ್ಟೆ ವ್ಯಾಪ್ತಿಯಲ್ಲಿ 3ನೇ ಸ್ಥಾನ.
➤ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಕಡಿಮೆ ಡೇಟಾ ದರವನ್ನು ಹೊಂದಿದ್ದು, ಪ್ರಸ್ತುತ ದೇಶಾದ್ಯಂತ 5.08 ಲಕ್ಷಕ್ಕೂ ಹೆಚ್ಚು 5G ಬೇಸ್ ಸ್ಟೇಷನ್‌ಗಳನ್ನು (BTS) ಸ್ಥಾಪಿಸಲಾಗಿದೆ.
➤ ಡಿಜಿಟಲ್ ಕಂದಕವನ್ನು ಕಡಿಮೆ ಮಾಡಲು ಸರ್ಕಾರವು ಶ್ರಮಿಸುತ್ತಿದ್ದು, ಜೂನ್ 2026ರ ವೇಳೆಗೆ ದೇಶದ ಎಲ್ಲಾ ಹಳ್ಳಿಗಳಿಗೆ 4G ಸೇವೆ ಒದಗಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಯು ಈಗಾಗಲೇ ಸುಮಾರು 97,000ಕ್ಕೂ ಹೆಚ್ಚು 4G ಸೈಟ್‌ಗಳನ್ನು ನಿರ್ಮಿಸಿದೆ. ಶೀಘ್ರದಲ್ಲೇ ಈ ಎಲ್ಲಾ 4G ಟವರ್‌ಗಳನ್ನು 5G ಗೆ ಮೇಲ್ದರ್ಜೆಗೇರಿಸಲಾಗುವುದು.
➤ ನೆಟ್‌ವರ್ಕ್ ಸಿದ್ಧತೆ ಸೂಚ್ಯಂಕ (NRI): ಇದು ಒಂದು ದೇಶವು ತಂತ್ರಜ್ಞಾನವನ್ನು (Technology), ಜನರನ್ನು (People), ಆಡಳಿತವನ್ನು (Governance) ಮತ್ತು ಅದರ ಪ್ರಭಾವವನ್ನು (Impact) ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಅಳೆಯುವ ಮಾಪಕವಾಗಿದೆ. ಇದು ಒಟ್ಟು 53 ಸೂಚಕಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸುತ್ತದೆ.
ಮಂಗಳವಾರ, 10 ಫೆಬ್ರುವರಿ 2026
3:41 ಅಪರಾಹ್ನ
Daily PDF
ನೆಟ್‌ವರ್ಕ್ ಸಿದ್ಧತೆ ಸೂಚ್ಯಂಕ 2025: ಭಾರತಕ್ಕೆ 45ನೇ ಸ್ಥಾನ; ಟೆಲಿಕಾಂ ಹೂಡಿಕೆಯಲ್ಲಿ ಜಗತ್ತಿಗೇ ನಂ.1
Authored by:
Heena Sheregar