➤ ನೈಪಿಡಾವ್ (ಮ್ಯಾನ್ಮಾರ್): ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು (Junta) ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ದೇಶದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 10,000ಕ್ಕೂ ಹೆಚ್ಚು ಕೈದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡಲಾಗುವುದು ಎಂದು ಮಿಲಿಟರಿ ಮುಖ್ಯಸ್ಥ ಸೀನಿಯರ್ ಜನರಲ್ ಮಿನ್ ಆಂಗ್ ಪ್ಲೇಯಿಂಗ್ ಘೋಷಿಸಿದ್ದಾರೆ.
➤ ಮಾರ್ಚ್ 2, 2026 ರಂದು ಹೊರಡಿಸಲಾದ ಈ ಆದೇಶದ ಪ್ರಕಾರ ಒಟ್ಟು 10,162 ಕೈದಿಗಳಿಗೆ ಕ್ಷಮಾದಾನ ನೀಡಲಾಗಿದೆ. ಬಿಡುಗಡೆಯಾದವರಲ್ಲಿ 7,337 ಮಂದಿ ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಶಿಕ್ಷೆಗೊಳಗಾದವರಾಗಿದ್ದಾರೆ. ತಲೆಮರೆಸಿಕೊಂಡಿದ್ದ ಅಥವಾ ವಿಚಾರಣೆ ಎದುರಿಸುತ್ತಿದ್ದ ಸುಮಾರು 12,487 ಜನರ ಮೇಲಿನ ಪ್ರಚೋದನಾಕಾರಿ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. 10 ಮಂದಿ ವಿದೇಶಿ ಕೈದಿಗಳನ್ನು ಬಿಡುಗಡೆ ಮಾಡಿ ಅವರ ದೇಶಗಳಿಗೆ ಗಡಿಪಾರು ಮಾಡಲಾಗುತ್ತಿದೆ.
➤ ಆಂಗ್ ಸಾನ್ ಸೂ ಕಿ: ಮ್ಯಾನ್ಮಾರ್‌ನ ಪ್ರಜಾಪ್ರಭುತ್ವವಾದಿ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಕಿ (Aung San Suu Kyi) ಅವರ ಬಿಡುಗಡೆಯ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. 2021ರ ಮಿಲಿಟರಿ ದಂಗೆಯ ನಂತರ ಸೂ ಕಿ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರು 27 ವರ್ಷಗಳ ಸುದೀರ್ಘ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅಂತರಾಷ್ಟ್ರೀಯ ಒತ್ತಡಗಳ ನಡುವೆಯೂ ಮಿಲಿಟರಿ ಸರ್ಕಾರ ಅವರನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
➤ ಈ ಕ್ಷಮಾದಾನದ ಹಿಂದಿನ ರಾಜಕೀಯ ಕಾರಣ: ಮ್ಯಾನ್ಮಾರ್‌ನಲ್ಲಿ ಕಳೆದ ಐದು ವರ್ಷಗಳಲ್ಲೇ ಮೊದಲ ಬಾರಿಗೆ ಸಂಸತ್ ಅಧಿವೇಶನ ಕರೆಯಲು ಮಿಲಿಟರಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಅಧಿವೇಶನ ಆರಂಭಕ್ಕೆ ಕೇವಲ ಎರಡು ವಾರಗಳ ಮುನ್ನ ಈ ಘೋಷಣೆ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಚುನಾವಣೆಗಳು "ಮುಕ್ತ ಮತ್ತು ನ್ಯಾಯಸಮ್ಮತವಾಗಿಲ್ಲ" ಎಂದು ಜಾಗತಿಕ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳನ್ನು ತಣಿಸಲು ಮತ್ತು ಆಂತರಿಕ ಅಸಮಾಧಾನವನ್ನು ಕಡಿಮೆ ಮಾಡಲು ಮಿಲಿಟರಿ ಈ 'ಕ್ಷಮಾದಾನ'ದ ತಂತ್ರ ಹೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
➤ ಮ್ಯಾನ್ಮಾರ್‌ನಲ್ಲಿ 2021ರ ಫೆಬ್ರವರಿಯಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸಿ ಮಿಲಿಟರಿ ಆಡಳಿತ (Junta) ಜಾರಿಗೆ ಬಂದಿತು. ಅಂದಿನಿಂದ ಅಲ್ಲಿ ನಾಗರಿಕ ಹಕ್ಕುಗಳ ಹೋರಾಟ ಮತ್ತು ಮಿಲಿಟರಿ ನಡುವೆ ಸಂಘರ್ಷ ಮುಂದುವರಿಯುತ್ತಲೇ ಇದೆ.
ಮಂಗಳವಾರ, 03 ಮಾರ್ಚ್ 2026
11:01 ಪೂರ್ವಾಹ್ನ
Daily PDF
ಮ್ಯಾನ್ಮಾರ್‌ನಲ್ಲಿ 10,000ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ: ಆಂಗ್ ಸಾನ್ ಸೂ ಕಿ ಬಿಡುಗಡೆ ಇಲ್ಲ!
Authored by:
Akshata Halli