➤ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಮೇರಾ ಯುವ ಭಾರತ' (MY Bharat) ಡಿಜಿಟಲ್ ವೇದಿಕೆಯು 3 ಕೋಟಿಗೂ ಹೆಚ್ಚು ಯುವಕರ ನೋಂದಣಿ (Registration) ಹೊಂದುವ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದೆ. ದೇಶದ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಲು ಮತ್ತು ಅವರಿಗೆ ಪ್ರಾಯೋಗಿಕ ಜ್ಞಾನ ಒದಗಿಸಲು ಆರಂಭಿಸಲಾದ ಈ ಯೋಜನೆಯು ಅತ್ಯಲ್ಪ ಅವಧಿಯಲ್ಲಿ ಭಾರತದ ಅತಿದೊಡ್ಡ ಯುವ ಸಂಪರ್ಕ ಜಾಲವಾಗಿ ಹೊರಹೊಮ್ಮಿದೆ.

  • ಆರಂಭವಾದ ದಿನಾಂಕ: 31 ಅಕ್ಟೋಬರ್ 2023 (ರಾಷ್ಟ್ರೀಯ ಏಕತಾ ದಿನ).
  • ಆರಂಭಿಸಿದವರು: ಪ್ರಧಾನಮಂತ್ರಿ ನರೇಂದ್ರ ಮೋದಿ.
  • ಸಂಬಂಧಿಸಿದ ಸಚಿವಾಲಯ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (Ministry of Youth Affairs and Sports).
  • ಪ್ರಸ್ತುತ ಮೈಲಿಗಲ್ಲು: 3 ಕೋಟಿಗೂ ಅಧಿಕ ಯುವಜನರ ನೋಂದಣಿ.
  • ರಾಜ್ಯವಾರು ಮುಂಚೂಣಿ: ಉತ್ತರ ಪ್ರದೇಶ (25.06 ಲಕ್ಷ ನೋಂದಣಿ) ಪ್ರಥಮ ಸ್ಥಾನದಲ್ಲಿದ್ದರೆ, ರಾಜಸ್ಥಾನ ಮತ್ತು ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ.

➤ ಮೇರಾ ಯುವ ಭಾರತ' ವೇದಿಕೆಯ ಪ್ರಮುಖ ಉದ್ದೇಶಗಳು:

  1. ಪ್ರಾಯೋಗಿಕ ಕಲಿಕೆ (Experiential Learning): ಸಾಂಪ್ರದಾಯಿಕ ತರಗತಿ ಶಿಕ್ಷಣವನ್ನು ಮೀರಿ ಯುವಕರಿಗೆ ನೈಜ ಜಗತ್ತಿನ ಸರ್ಕಾರಿ ಯೋಜನೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅನುಭವ ಒದಗಿಸುವುದು.
  2. ಸಮುದಾಯ ಸೇವೆ ಮತ್ತು ಯುವ ನಾಯಕತ್ವ: ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು ಹಾಗೂ 'ವಿಕಸಿತ ಭಾರತ 2047' (Viksit Bharat @2047) ಗುರಿಯತ್ತ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ನೇರ ಭಾಗವಹಿಸುವಿಕೆಗೆ ವೇದಿಕೆ ಒದಗಿಸುವುದು.
  3. ಸಂಯೋಜಿತ ವ್ಯವಸ್ಥೆ: ನೆಹರೂ ಯುವ ಕೇಂದ್ರ ಸಂಘಟನಾ (NYKS) ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ನಂತಹ ವಿವಿಧ ಡಿಜಿಟಲ್ ನೆಟ್‌ವರ್ಕ್‌ಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿಯಲ್ಲಿ ತರುವುದು.

➤ ಯುವಜನರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳು 
1. AI-ಆಧಾರಿತ 'CV Builder' ಸೌಲಭ್ಯ: ಯುವಕರು ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗುವಂತೆ ವೇದಿಕೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಿವಿ ಬಿಲ್ಡರ್ ಪರಿಚಯಿಸಲಾಗಿದೆ. ಇದರ ಮೂಲಕ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ವೃತ್ತಿಪರ ವಿವರಗಳನ್ನು ಸುಲಭವಾಗಿ ಸಿದ್ಧಪಡಿಸಿಕೊಳ್ಳಬಹುದು.
2. ಅನುಭವಾಧರಿತ ಕಲಿಕಾ ಕಾರ್ಯಕ್ರಮಗಳು (ELPs): ಈವರೆಗೆ 1.22 ಲಕ್ಷಕ್ಕೂ ಹೆಚ್ಚು ಯುವಕರು ಸುಮಾರು 25,000 ಅನುಭವಾಧರಿತ ಕಲಿಕಾ ಕಾರ್ಯಕ್ರಮಗಳಲ್ಲಿ (Experiential Learning Programmes) ಭಾಗವಹಿಸಿ ಪ್ರಾಯೋಗಿಕ ಅನುಭವ ಪಡೆದುಕೊಂಡಿದ್ದಾರೆ. 
3. 'ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್' (VBYLD): ಯುವಕರು ತಮ್ಮ ನವೀನ ಆಲೋಚನೆಗಳು, ನಾಯಕತ್ವ ಹಾಗೂ ಪರಿಕಲ್ಪನೆಗಳನ್ನು ದೇಶದ ನಾಯಕರೊಂದಿಗೆ ಮತ್ತು ನೀತಿ ನಿರೂಪಕರೊಂದಿಗೆ ಹಂಚಿಕೊಳ್ಳಲು ಈ ಕಾರ್ಯಕ್ರಮ ವಿಶೇಷ ಅವಕಾಶ ಕಲ್ಪಿಸುತ್ತದೆ.