➤ ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2026ರ ಬಜೆಟ್ ಅಧಿವೇಶನದಲ್ಲಿ ಕೆಲವು ಐತಿಹಾಸಿಕ ವಿಧೇಯಕಗಳಿಗೆ ಅನುಮೋದನೆ ನೀಡಿದೆ. ಇವುಗಳಲ್ಲಿ ಮುಖ್ಯವಾಗಿ 'ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ' ಮತ್ತು ಮರ್ಯಾದಾ ಹತ್ಯೆ ತಡೆಗೆ ಸಂಬಂಧಿಸಿದ 'ಇವ ನಮ್ಮವ ಇವ ನಮ್ಮವ' ವಿಧೇಯಕಗಳು ಸೇರಿವೆ.
➤ ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ - 2026: ರಾಜ್ಯದ ಮೂಲೆ ಮೂಲೆಗಳಲ್ಲಿ ಹಂಚಿಹೋಗಿರುವ ಪ್ರಾಚೀನ ಜ್ಞಾನವನ್ನು ಡಿಜಿಟಲೀಕರಣದ ಮೂಲಕ ಸಂರಕ್ಷಿಸುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಹಂಚಿಹೋಗಿರುವ ತಾಳೆಗರಿ, ತಾಮ್ರಪತ್ರ, ಮರದ ತೊಗಟೆ ಮತ್ತು ಬಟ್ಟೆಗಳ ಮೇಲಿರುವ ಅಮೂಲ್ಯ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ವಿಧೇಯಕವನ್ನು ತರಲಾಗಿದೆ. ಇದರ ಅನ್ವಯ ವಿಶೇಷ ಪ್ರಾಧಿಕಾರವೊಂದನ್ನು ರಚಿಸಿ, ವಾರ್ಷಿಕವಾಗಿ ಕನಿಷ್ಠ 5 ಲಕ್ಷ ಪುಟಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಈ ಜ್ಞಾನ ಭಂಡಾರವನ್ನು ವೈಜ್ಞಾನಿಕವಾಗಿ ಉಳಿಸಿಕೊಡುವ ಗುರಿ ಹೊಂದಲಾಗಿದೆ.
➤ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಪ್ರಕಾರ, ವ್ಯಕ್ತಿಗತ ಅಥವಾ ಖಾಸಗಿ ಸಂಸ್ಥೆಗಳ ಬಳಿ ಇರುವ ಅಮೂಲ್ಯ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲು ಈ ಕಾನೂನು ಸಹಕಾರಿಯಾಗಲಿದೆ.
➤ ಇವ ನಮ್ಮವ ಇವ ನಮ್ಮವ' ವಿಧೇಯಕ (ಮರ್ಯಾದಾ ಹತ್ಯೆ ತಡೆ): ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳ ಸಂದರ್ಭದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಈ ಕಟ್ಟುನಿಟ್ಟಿನ ಕಾನೂನನ್ನು ತರಲಾಗಿದೆ.ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ವಿಧೇಯಕ.
# ಪ್ರಮುಖ ನಿಬಂಧನೆಗಳು:
- ಮರ್ಯಾದೆಯ ಹೆಸರಿನಲ್ಲಿ ನಡೆಯುವ ಹಲ್ಲೆ, ಹತ್ಯೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು.
- ಪ್ರೇಮಿಗಳಿಗೆ ಅಥವಾ ದಂಪತಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ.
- ಸಂವಿಧಾನದ 21ನೇ ವಿಧಿಯಡಿ ನೀಡಲಾದ 'ಜೀವಿಸುವ ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು' ಎತ್ತಿಹಿಡಿಯುವುದು.
➤ ವೃತ್ತಿ ತೆರಿಗೆ ತಿದ್ದುಪಡಿ ವಿಧೇಯಕ - ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ: ರಾಜ್ಯ ಸರ್ಕಾರವು ಸಾಮಾನ್ಯ ತೆರಿಗೆದಾರರು ಮತ್ತು ಸಣ್ಣ ಉದ್ಯೋಗಿಗಳ ಹಿತದೃಷ್ಟಿಯಿಂದ ವೃತ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಮಾಸಿಕ 25,000 ರೂ.ಗಿಂತ ಹೆಚ್ಚು ಆದಾಯವಿದ್ದು ವಾರ್ಷಿಕ 2,500 ರೂ. ತೆರಿಗೆ ಪಾವತಿಸುವವರು ಇನ್ನು ಮುಂದೆ ಪ್ರತ್ಯೇಕವಾಗಿ ರಿಟರ್ನ್ಸ್ (Returns) ಸಲ್ಲಿಸುವ ಅಗತ್ಯವಿಲ್ಲ. ವಿಶೇಷವಾಗಿ, ಈಗಾಗಲೇ ತೆರಿಗೆ ವಿನಾಯಿತಿ ಹೊಂದಿದ್ದರೂ ಕಡ್ಡಾಯವಾಗಿ ರಿಟರ್ನ್ಸ್ ಸಲ್ಲಿಸಬೇಕಾಗಿದ್ದ ಹಿರಿಯ ನಾಗರಿಕರು, ಸೈನಿಕರು ಮತ್ತು ವಿಕಲಚೇತನರಿಗೆ ಈ ಹೊಸ ನಿಯಮದಿಂದ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಂತಾಗಿದೆ.
➤ ಹಸ್ತಪ್ರತಿ ವಿಧೇಯಕವು ಕರ್ನಾಟಕದ 'ಸಾಂಸ್ಕೃತಿಕ ಇತಿಹಾಸ'ದ ಅಡಿಯಲ್ಲಿ ಬಂದರೆ, 'ಇವ ನಮ್ಮವ' ವಿಧೇಯಕವು 'ಸಾಮಾಜಿಕ ಸುಧಾರಣೆ ಮತ್ತು ರಾಜಕೀಯ' ವಿಭಾಗದ ಅಡಿಯಲ್ಲಿ ಪ್ರಮುಖವೆನಿಸುತ್ತದೆ.
ಗುರುವಾರ, 26 ಮಾರ್ಚ್ 2026
1:45 ಅಪರಾಹ್ನ
Daily PDF
ಕರ್ನಾಟಕ ವಿಧಾನಮಂಡಲದಲ್ಲಿ ಮಹತ್ವದ ವಿಧೇಯಕಗಳ ಅಂಗೀಕಾರ: ಜ್ಞಾನ ಭಂಡಾರ ಸಂರಕ್ಷಣೆ ಮತ್ತು 'ಇವ ನಮ್ಮವ' ಕ್ರಾಂತಿ
Authored by:
Akshata Halli