➤ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಜಗತ್ತಿಗೆ ನೆನಪಿಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 11ರಂದು ವಿಶ್ವದಾದ್ಯಂತ 'ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ' (International Day of the Girl Child) ಯನ್ನು ಆಚರಿಸಲಾಗುತ್ತದೆ.
- ನಿರ್ಣಯ ಅಂಗೀಕಾರ: 2011ರ ಡಿಸೆಂಬರ್ 19ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UN General Assembly) 'ನಿರ್ಣಯ 66/170' ಅನ್ನು ಅಂಗೀಕರಿಸುವ ಮೂಲಕ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ಘೋಷಿಸಿತು.   
- ಮೊದಲ ಆಚರಣೆ: 2012ರ ಅಕ್ಟೋಬರ್ 11 ರಂದು ಮೊದಲ ಬಾರಿಗೆ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಯಿತು.   
➤ ದಿನಾಚರಣೆಯ ಮುಖ್ಯ ಉದ್ದೇಶ ಮತ್ತು ಮಹತ್ವ
1. ಅರಿವು ಮೂಡಿಸುವುದು: ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಪೋಷಣೆ, ಲಿಂಗ ಸಮಾನತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು.
2. ಸಮಾನ ಅವಕಾಶ: ಜಾಗತಿಕ ಮಟ್ಟದಲ್ಲಿ ಬಾಲಕಿಯರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಮಾನ ವೇದಿಕೆ ನೀಡುವುದು.
3. ತಾರತಮ್ಯ ತಡೆಗಟ್ಟುವಿಕೆ: ಬಾಲ್ಯವಿವಾಹ, ಭ್ರೂಣಹತ್ಯೆ, ಶಾಲೆಯಿಂದ ಹೊರಗುಳಿಯುವಿಕೆ ಮತ್ತು ಲಿಂಗಾಧಾರಿತ ಹಿಂಸೆಯನ್ನು ತಡೆಗಟ್ಟುವುದು.   
➤ ಲಿಂಗತ್ವ ಸಂಬಂಧಿತ ಪ್ರಮುಖ ಅಂಕಿ-ಅಂಶಗಳು   
1. ಬಾಲ್ಯ ವಿವಾಹ (Child Marriage)
- ಜಾಗತಿಕ ಮಟ್ಟ: ಯುನೆಸ್ಕೋ (UNESCO) ಮತ್ತು ಯುನಿಸೆಫ್ (UNICEF) ವರದಿಗಳ ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷ ಸುಮಾರು 1.2 ಕೋಟಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ.   
- ಭಾರತದ ಸ್ಥಿತಿ: ಭಾರತದಲ್ಲಿ ಇಂದಿಗೂ ಸುಮಾರು ಶೇ. 27ರಷ್ಟು ಹೆಣ್ಣುಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
2. ಶಾಲೆಯಿಂದ ಹೊರಗುಳಿಯುವಿಕೆ (School Dropouts)
- ಜಾಗತಿಕವಾಗಿ: ಜಗತ್ತಿನಾದ್ಯಂತ ಸುಮಾರು 12.2 ಕೋಟಿ ಬಾಲಕಿಯರು ಶಾಲೆಯಿಂದ ಹೊರಗುಳಿದಿದ್ದಾರೆ.
- ಭಾರತ: ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣ ಶೇ. 96.3 ರಷ್ಟಿದ್ದು ಅತ್ಯುತ್ತಮವಾಗಿದೆ. ಪ್ರಾಥಮಿಕ ಹಂತದಲ್ಲಿ ಶಾಲಾ ತ್ಯಾಗದ ಪ್ರಮಾಣ ಶೂನ್ಯಕ್ಕೆ ತಲುಪಿದರೂ, ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣ ತಲುಪುವಷ್ಟರಲ್ಲಿ ಶಾಲಾ ತ್ಯಾಗದ ಸರಾಸರಿ ಪ್ರಮಾಣ ಶೇ. 7 ರಿಂದ 8 ರಷ್ಟು ಇರುತ್ತದೆ.   
- ಕರ್ನಾಟಕ: ಕರ್ನಾಟಕದಲ್ಲಿ ಪ್ರೌಢಶಾಲಾ ಹಂತದಲ್ಲಿ ಹೆಣ್ಣುಮಕ್ಕಳು ಶಾಲೆ ತೊರೆಯುವ ಪ್ರಮಾಣ ಶೇ. 13.9 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಉಚಿತ ಗ್ರಾಮೀಣ ಸಾರಿಗೆ, ಶಾಲಾ ಕೌನ್ಸೆಲಿಂಗ್ ಮತ್ತು ಸುರಕ್ಷತಾ ಕ್ರಮಗಳನ್ನು ಬಲಪಡಿಸುತ್ತಿದೆ.   
3. ಆರೋಗ್ಯ ಮತ್ತು ಪೋಷಣೆ (Health & Nutrition)
- ರಕ್ತಹೀನತೆ (Anemia): ಭಾರತದಲ್ಲಿ 15ರಿಂದ 19 ವರ್ಷದೊಳಗಿನ ಶೇ. 54ಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
➤ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಭಾರತ ಸರ್ಕಾರದ ಪ್ರಮುಖ ಯೋಜನೆಗಳು:

ಯೋಜನೆಯ ಹೆಸರು ಪ್ರಾರಂಭಿಸಿದ ವರ್ಷ ಮುಖ್ಯ ಉದ್ದೇಶ
ಬೇಟಿ ಬಚಾವೋ, ಬೇಟಿ ಪಢಾವೋ (BBBP) 2015 ಜನನ ಸಮಯದಲ್ಲಿ ಲಿಂಗಾನುಪಾತ ಸುಧಾರಣೆ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು.
ಸುಕನ್ಯಾ ಸಮೃದ್ಧಿ ಯೋಜನೆ (SSY) 2015 ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಕ್ಕಾಗಿ ಹೆತ್ತವರಿಗೆ ಸಣ್ಣ ಉಳಿತಾಯ ಯೋಜನೆಯ ಆಸರೆ ಒದಗಿಸುವುದು.
ಹದಿಹರೆಯದ ಹೆಣ್ಣುಮಕ್ಕಳ ಯೋಜನೆ (SAG) -- 11 ರಿಂದ 14 ವರ್ಷದ ಶಾಲೆಯಿಂದ ಹೊರಗುಳಿದ ಬಾಲಕಿಯರಿಗೆ ಪೋಷಣೆ ಮತ್ತು ಜೀವನ ಕೌಶಲ್ಯ ನೀಡುವುದು.
ಉಡಾನ್ ಯೋಜನೆ (Udaan) 2014 ಪ್ರ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸುವುದು.