➤ ಪ್ರಪಂಚದಾದ್ಯಂತ ಬಡತನ ಮತ್ತು ಸಾಮಾಜಿಕ ಬಹಿಷ್ಕಾರದ (Social Exclusion) ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಾನವ ಘನತೆಯನ್ನು ಕಾಪಾಡುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 17 ರಂದು 'ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ'ವನ್ನು ಆಚರಿಸಲಾಗುತ್ತದೆ. ಬಡತನವು ಕೇವಲ ಆರ್ಥಿಕ ಸಮಸ್ಯೆಯಲ್ಲ, ಅದೊಂದು ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ಈ ದಿನವು ಜಗತ್ತಿಗೆ ಸಾರುತ್ತದೆ.
➤ ವರ್ಷ 2026ರ ಥೀಮ್ (Theme):
- 2026–2028ರ ಒಟ್ಟಾರೆ ಥೀಮ್: "ಶಾಂತಿ ಮತ್ತು ಮಾನವ ಹಕ್ಕುಗಳಿಗಾಗಿ ಒಟ್ಟಾಗಿ" (United for Peace and Human Rights)
- 2026ರ ನಿರ್ದಿಷ್ಟ ಥೀಮ್: "ಎಲ್ಲರಿಗೂ ಸುರಕ್ಷಿತ ಮನೆಗಳು" (Safe Homes for All)
➤ 2026ರ ಆಚರಣೆಯ ಪ್ರಮುಖ 3 ಉದ್ದೇಶಗಳು:
1. ವಸತಿ ಹಕ್ಕುಗಳನ್ನು ಮಾನವ ಹಕ್ಕುಗಳಾಗಿ ಪರಿಗಣಿಸುವುದು: ಯೋಗ್ಯ ವಸತಿಯು ಘನತೆಯಿಂದ ಬದುಕುವ ಮೂಲಭೂತ ಹಕ್ಕು. ಸರ್ಕಾರಗಳು ತಮ್ಮ ನೀತಿ ನಿರೂಪಣೆ, ಯೋಜನೆಗಳು ಮತ್ತು ಬಜೆಟ್ ರೂಪಿಸುವಾಗ ವಸತಿ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
2. ಬಡವರು ಮತ್ತು ವಸತಿ ವಂಚಿತರ ಅರ್ಥಪೂರ್ಣ ಭಾಗವಹಿಸುವಿಕೆ: ಬಡತನ ಹಾಗೂ ವಸತಿ ವಂಚನೆಯಿಂದ ಬಳಲುತ್ತಿರುವವರ ಅನುಭವ ಮತ್ತು ಪರಿಣತಿಯನ್ನು ವಸತಿ ನೀತಿಗಳ ಅಭಿವೃದ್ಧಿ, ಅನುಷ್ಠಾನ ಮತ್ತು ಮೌಲ್ಯಮಾಪನದಲ್ಲಿ ಬಳಸಿಕೊಳ್ಳಬೇಕು.
3. ಸುರಕ್ಷಿತ ಮತ್ತು ಕೈಗೆಟುಕುವ ವಸತಿಗಾಗಿ ಸಂಪನ್ಮೂಲ ಕ್ರೋಢೀಕರಣ: ದುರ್ಬಲ ವರ್ಗದವರನ್ನು ಕಡೆಗಣಿಸದೆ ಎಲ್ಲರಿಗೂ ಸುರಕ್ಷಿತ ಮತ್ತು ಕೈಗೆಟುಕುವ ಬೆಲೆಯ ವಸತಿ ಲಭ್ಯವಾಗುವಂತೆ ಸಾರ್ವಜನಿಕ ನಿಧಿ ಹಾಗೂ ಇತರ ಸಂಪನ್ಮೂಲಗಳನ್ನು ಬಲಪಡಿಸುವುದು.
➤ ಇತಿಹಾಸ ಮತ್ತು ಹಿನ್ನೆಲೆ
- 1987ರ ಅಕ್ಟೋಬರ್ 17: ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ಟ್ರೊಕಾಡೆರೊದಲ್ಲಿ ಸುಮಾರು 100,000 ಜನರು ಒಟ್ಟಾಗಿ ಸೇರಿ ಬಡತನ, ಹಸಿರು ಮತ್ತು ಹಿಂಸಾಚಾರದಿಂದ ಬಳಲುತ್ತಿರುವ ಜನರಿಗೆ ಗೌರವ ಸಲ್ಲಿಸಿದರು. ಬಡತನವೆಂಬುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಮೊದಲು ಘೋಷಿಸಲಾಯಿತು.
- ವಿಶ್ವಸಂಸ್ಥೆಯ ಅಧಿಕೃತ ಘೋಷಣೆ: 1992ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯು (UNGA) ರೆಸಲ್ಯೂಶನ್ 47/196 ಅನ್ನು ಅಂಗೀಕರಿಸಿ, ಅಕ್ಟೋಬರ್ 17 ಅನ್ನು ಅಧಿಕೃತವಾಗಿ 'ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ'ವೆಂದು ಘೋಷಿಸಿತು. 1993ರಿಂದ ಇದನ್ನು ಜಾಗತಿಕವಾಗಿ ನಿರಂತರವಾಗಿ ಆಚರಿಸಲಾಗುತ್ತದೆ.
➤ ಬಡತನ ನಿರ್ಮೂಲನೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು (SDGs): ವಿಶ್ವಸಂಸ್ಥೆಯ 2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ (2030 Agenda for Sustainable Development) ಹಲವು ಪ್ರಮುಖ ಗುರಿಗಳೊಂದಿಗೆ ಈ ವಸತಿ ಮತ್ತು ಬಡತನ ನಿರ್ಮೂಲನಾ ಅಭಿಯಾನವು ನೇರವಾಗಿ ಬೆಸೆದುಕೊಂಡಿದೆ:
- ಗುರಿ 1: ಬಡತನವಿಲ್ಲ (No Poverty): ಎಲ್ಲಾ ರೂಪಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
- ಗುರಿ 10: ಅಸಮಾನತೆಗಳ ಕಡಿತ (Reduced Inequalities): ದೇಶಗಳ ಒಳಗೆ ಮತ್ತು ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವುದು.
- ಗುರಿ 11: ಸುಸ್ಥಿರ ನಗರಗಳು ಮತ್ತು ಸಮುದಾಯಗಳು: ಎಲ್ಲರಿಗೂ ಸುರಕ್ಷಿತ, ಚೇತೋಹಾರಿ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸುವುದು.
- ಗುರಿ 16: ಶಾಂತಿ, ನ್ಯಾಯ ಮತ್ತು ಬಲವಾದ ಸಂಸ್ಥೆಗಳು: ಶಾಂತಿ, ಅಂತರ್ಗತತೆ ಮತ್ತು ನ್ಯಾಯಕ್ಕೆ ಎಲ್ಲರ ಪ್ರವೇಶವನ್ನು ಸುಲಭಗೊಳಿಸುವುದು.
ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ 2026
Published by Akshata Halli
2 hours ago