➤ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಮೂರನೇ ಸಮಿತಿಯಲ್ಲಿ (Third Committee) ಮರಣದಂಡನೆಗೆ ಜಾಗತಿಕವಾಗಿ ತಾತ್ಕಾಲಿಕ ತಡೆ (Global Moratorium) ಹೇರಲು ಹಾಗೂ ಅದನ್ನು ರದ್ದುಗೊಳಿಸುವತ್ತ ಹೆಜ್ಜೆ ಇಡುವಂತೆ ಕರೆ ನೀಡುವ ಕರಡು ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿದೆ. ಮರಣದಂಡನೆಯ ವಿರುದ್ಧ ಯಾವುದೇ ಜಾಗತಿಕ ಒಮ್ಮತವಿಲ್ಲ (No global consensus) ಮತ್ತು ತಮ್ಮದೇ ಆದ ಕಾನೂನು ಹಾಗೂ ಶಿಕ್ಷೆಗಳನ್ನು ನಿರ್ಧರಿಸುವ ಸಾರ್ವಭೌಮ ಹಕ್ಕು ಪ್ರತಿ ದೇಶಕ್ಕೂ ಇದೆ ಎಂದು ಭಾರತ ಸ್ಪಷ್ಟಪಡಿಸಿದೆ.
- ಮತದಾನದ ವಿವರ: 193 ಸದಸ್ಯ ರಾಷ್ಟ್ರಗಳ ಈ ಪ್ರಕ್ರಿಯೆಯಲ್ಲಿ 133 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಭಾರತ ಸೇರಿದಂತೆ 33 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿವೆ ಮತ್ತು 16 ದೇಶಗಳು ಮತದಾನದಿಂದ ದೂರ ಉಳಿದಿವೆ.
- ಭಾರತದೊಂದಿಗೆ ನಿಂತ ಪ್ರಮುಖ ದೇಶಗಳು: ಅಮೆರಿಕ (US), ಚೀನಾ, ಜಪಾನ್, ಇರಾನ್, ಈಜಿಪ್ಟ್, ಪಾಕಿಸ್ತಾನ ಮತ್ತು ಸಿಂಗಾಪುರದಂತಹ ದೇಶಗಳು ಸಹ ಈ ನಿರ್ಣಯವನ್ನು ವಿರೋಧಿಸಿವೆ.
- ಭಾರತದ ಹಿಂದಿನ ನಿಲುವು: ಈ ಹಿಂದೆ 2016, 2018 ಮತ್ತು 2024ರಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನಗಳಲ್ಲೂ ಭಾರತ ಇದೇ ರೀತಿ ಮರಣದಂಡನೆ ತಡೆ ನಿರ್ಣಯದ ವಿರುದ್ಧ ಮತ ಚಲಾಯಿಸಿತ್ತು.
➤ ಭಾರತ ಈ ನಿರ್ಣಯವನ್ನು ವಿರೋಧಿಸಲು ಪ್ರಮುಖ ಕಾರಣಗಳು: ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ (Bhavika Mangalanandan) ಅವರು ಭಾರತದ ನಿಲುವನ್ನು ಸಮರ್ಥಿಸಿಕೊಂಡು ಪ್ರಮುಖ ಅಂಶಗಳನ್ನು ಮಂಡಿಸಿದ್ದಾರೆ:
1. ರಾಷ್ಟ್ರೀಯ ಸಾರ್ವಭೌಮತ್ವ (National Sovereignty): ಪ್ರತಿಯೊಂದು ಸಾರ್ವಭೌಮ ರಾಷ್ಟ್ರಕ್ಕೂ ತನ್ನದೇ ಆದ ಕಾನೂನು ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಮತ್ತು ಅಪರಾಧಗಳಿಗೆ ತಕ್ಕ ಶಿಕ್ಷೆಯನ್ನು ನಿರ್ಧರಿಸುವ ಹಕ್ಕಿದೆ.
2. ICCPR ಆರ್ಟಿಕಲ್ 6ರ ಮಾನ್ಯತೆ: ಅಂತರರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಡಂಬಡಿಕೆಯ (ICCPR) 6ನೇ ವಿಧಿಯು ಕೆಲವು ನಿರ್ಬಂಧಗಳಿಗೆ ಒಳಪಟ್ಟು ಅತ್ಯಂತ ಗಂಭೀರ ಅಪರಾಧಗಳಿಗೆ ಮರಣದಂಡನೆ ವಿಧಿಸಲು ಅನುಮತಿ ನೀಡುತ್ತದೆ.
3. 'ಅಪರೂಪದಲ್ಲಿ ಅಪರೂಪದ' (Rarest of Rare) ಸಿದ್ಧಾಂತ: ಭಾರತದಲ್ಲಿ ಮರಣದಂಡನೆಯನ್ನು ಸಾಮಾನ್ಯವಾಗಿ ವಿಧಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಯಂತೆ ಕೇವಲ 'ಅಪರೂಪದಲ್ಲಿ ಅಪರೂಪದ' (Rarest of Rare) ಪ್ರಕರಣಗಳಲ್ಲಿ ಮಾತ್ರ ಈ ಶಿಕ್ಷೆ ನೀಡಲಾಗುತ್ತದೆ.
4. ಕಠಿಣ ಕಾನೂನು ಸುರಕ್ಷತೆಗಳು: ಭಾರತದಲ್ಲಿ ಮರಣದಂಡನೆ ವಿಧಿಸುವ ಮುನ್ನ ನಿರಪರಾಧಿತ್ವದ ಪೂರ್ವಭಾವನೆ (Presumption of innocence), ಉನ್ನತ ನ್ಯಾಯಾಲಯದಿಂದ ಕಡ್ಡಾಯ ದೃಢೀಕರಣ (Mandatory confirmation by a higher court), ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶ ಸೇರಿದಂತೆ ಹಲವು ಕಾನೂನು ರಕ್ಷಣೆಗಳಿವೆ.
5. ಕಾನೂನುಬಾಹಿರ ಹತ್ಯೆಗಳೊಂದಿಗೆ ಹೋಲಿಕೆಗೆ ಆಕ್ಷೇಪ: ಕಾನೂನು ಪ್ರಕ್ರಿಯೆಯ ಮೂಲಕ ನೀಡಲಾಗುವ ಮರಣದಂಡನೆಯನ್ನು 'ಕಾನೂನುಬಾಹಿರ ಅಥವಾ ಅನಿಯಂತ್ರಿತ ಹತ್ಯೆಗಳು' (Extrajudicial, summary or arbitrary executions) ಹಾಗೂ 'ಚಿತ್ರಹಿಂಸೆ'ಯೊಂದಿಗೆ ಸಮೀಕರಿಸುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಕಾನೂನುಬಾಹಿರ ಹತ್ಯೆಗಳನ್ನು ತಡೆಯುವ ಪ್ರತ್ಯೇಕ ನಿರ್ಣಯವನ್ನು ಭಾರತ ಬೆಂಬಲಿಸಿದರೂ, ಅದರ 6ನೇ ಪ್ಯಾರಾಗ್ರಾಫ್‌ನಲ್ಲಿದ್ದ ವಿಶೇಷ ವರದಿಗಾರರ (Special Rapporteur) ಅಭಿಪ್ರಾಯದಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿದೆ.
➤ ಸಂವಿಧಾನದ ಸಂಪರ್ಕ: ಭಾರತೀಯ ಸಂವಿಧಾನದ ವಿಧಿ 21 (Article 21) ಜೀವಿಸುವ ಹಕ್ಕನ್ನು ಖಾತರಿಪಡಿಸುತ್ತದೆ, ಆದರೆ "ಕಾನೂನಿನಿಂದ ಸ್ಥಾಪಿತವಾದ ಕಾರ್ಯವಿಧಾನದ (Procedure established by law)" ಮೂಲಕ ಮಾತ್ರ ವ್ಯಕ್ತಿಯ ಜೀವವನ್ನು ಕಸಿದುಕೊಳ್ಳಬಹುದು ಎಂದು ತಿಳಿಸುತ್ತದೆ.
➤ ಪ್ರಮುಖ ಸುಪ್ರೀಂ ಕೋರ್ಟ್ ತೀರ್ಪು: ಬಚನ್ ಸಿಂಗ್ vs ಪಂಜಾಬ್ ರಾಜ್ಯ (1980) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದು, 'ಅಪರೂಪದಲ್ಲಿ ಅಪರೂಪದ' (Rarest of Rare) ಸಿದ್ಧಾಂತವನ್ನು ಪರಿಚಯಿಸಿತು.
➤ ಕ್ಷಮಾದಾನ ಅಧಿಕಾರ: ಭಾರತದ ರಾಷ್ಟ್ರಪತಿಗಳು ವಿಧಿ 72 (Article 72) ರ ಅಡಿಯಲ್ಲಿ ಮರಣದಂಡನೆಯನ್ನು ಕ್ಷಮಿಸುವ, ಮುಂದೂಡುವ ಅಥವಾ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ವಿಶೇಷ ಅಧಿಕಾರ ಹೊಂದಿದ್ದಾರೆ.